Kundapra.com ಕುಂದಾಪ್ರ ಡಾಟ್ ಕಾಂ

ಕಳೆದ 10 ವರ್ಷದಿಂದ ರಾಜಕೀಯ ನಾಯಕರು ಸುಂದರ ಕರ್ನಾಟಕದ ಕನಸೇ ಕಂಡಿಲ್ಲ: ಚಕ್ರವರ್ತಿ ಸೂಲಿಬೆಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 3 ಪ್ರಮುಖ ರಾಜಕೀಯ ಪಕ್ಷದ ಐವರು ಮುಖ್ಯಮಂತ್ರಿಗಳು ರಾಜ್ಯಭಾರ ಮಾಡಿದ್ದರೂ ಕೂಡ ಸುಂದರ ಕರ್ನಾಟಕದ ಬಗ್ಗೆ ಕನಸೇ ಕಂಡಿಲ್ಲ. ಬದಲಾಗಿ ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಚಿಂತೆ ಮಾಡಿರುವುದರಿಂದ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ 25 ವರ್ಷ ಹಿಂದುಳಿದಿದೆ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ತಲ್ಲೂರಿನ ಕುಂತಿ ಅಮ್ಮ ದೇವಸ್ಥಾನದ ಆವರಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ವತಿಯಿಂದ ಆಯೋಜಿಸಿದ ನನ್ನ ಕನಸಿನ ಕರ್ನಾಟಕ ಕುರಿತ ಬಹಿರಂಗ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಶಿರಾಡಿ ಘಾಟ್ ಪ್ರತಿ ಮಳೆಗಾಲದಲ್ಲೂ ಸಂಚಾರ ಸ್ಥಗಿತವಾಗುತ್ತದೆ. ನಮ್ಮನ್ನಾಳುವ ವರ್ಗಕ್ಕೆ ಕನಿಷ್ಠ 10 ವರ್ಷಕ್ಕೆ ಬಾಳಿಕೆ ಬರುವ ರಸ್ತೆ ನಿರ್ಮಿಸಲು ಇಷ್ಟು ವರ್ಷದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕೃಷ್ಣ- ಗೋದಾವರಿ ನದಿ ನೀರಿನ ದೊಡ್ಡ ಯೋಜನೆಯನ್ನು ಆಂಧ್ರಪ್ರದೇಶದಲ್ಲಿ ಕೇವಲ ಒಂದೇ ವರ್ಷದಲ್ಲಿ ಪೂರ್ಣ ಮಾಡಿರುವ ಉದಾಹರಣೆಯಿದ್ದರೂ, ನಾನು ಹುಟ್ಟಿದ 3ನೇ ವರ್ಷಕ್ಕೆ ಆರಂಭವಾದ ಉಡುಪಿಯ ಅತಿ ದೊಡ್ಡ ನದಿ ನೀರಿನ ಯೋಜನೆ ವಾರಾಹಿ ಇನ್ನೂ ಅದೇ ಆರಂಭಿಕ ಹಂತದಲ್ಲೇ ಇದೆ. 32 ವರ್ಷಗಳಲ್ಲಿ ಹನಿ ನೀರಿಗಾಗಿ ಈ ಭಾಗದ ಜನ ಪರಿತಪಿಸುತ್ತಿದ್ದಾರೆ ಎಂದವರು ವಿಷಾದಿಸಿದರು.

ರಾಜಕೀಯ ಪ್ರವೇಶಿಸೋಲ್ಲ:
ನಾನು ಮುಂಬರುವ ಚುನಾವಣೆ ಸಲುವಾಗಿ ಖಂಡಿತ ಇಲ್ಲಿಗೆ ಬಂದಿಲ್ಲ. ಚುನಾವಣೆಗೆ ಸ್ಪರ್ಧಿಸುವುದಾದರೆ ನಿನ್ನೆ ಕಲ್ಬುರ್ಗಿ, ಮೊನ್ನೆ ಅಥಣಿ ಹೀಗೆ ಕರ್ನಾಟಕದ ಊರೂರು ಸುತ್ತುತ್ತಿರಲಿಲ್ಲ. ಕಳೆದ ಬಾರಿ ಇಲ್ಲಿನ ಶಾಸಕರೊಬ್ಬರು ನೀವು ಟಿಕೇಟ್ ಪಡೆದು ಗೆದ್ದು ಬನ್ನಿ ಎಂದಿದ್ದರು. ಆದರೆ ನನಗೆ ಉಡುಪಿ ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, ನಾನು ನಯವಾಗಿಯೇ ತಿರಸ್ಕರಿಸಿದ್ದೇನೆ. ನನ್ನ ಕನಸಿನ ಕರ್ನಾಟಕಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದರು.

ಮಣಿಪಾಲ ಎಂಐಟಿಯ ಪ್ರೊ| ಎಸ್.ವಿ. ಉದಯಕುಮಾರ ಶೆಟ್ಟಿ ಮಾತನಾಡಿ, ಯುವಕರಲ್ಲಿ ಅತಿಯಾದ ಆತ್ಮವಿಶ್ವಾಸವಿರಬಾರದು. ನಿಮ್ಮ ಬಗ್ಗೆ ನಿಮಗೆ ಮೊದಲು ನಂಬಿಕೆ ಇರಲಿ. ದೈವಭಕ್ತಿ, ದೇಶಭಕ್ತಿ, ಮಾತೃಭಕ್ತಿ ನಿಮ್ಮಲ್ಲಿ ಇದ್ದರೆ ಯಶಸ್ಸು ಖಂಡಿತ ಸಾಧ್ಯ ಎಂದರು. ತಲ್ಲೂರು ಕುಂತಿ ಅಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ.ಎನ್. ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version