Kundapra.com ಕುಂದಾಪ್ರ ಡಾಟ್ ಕಾಂ

ಬಾಲಕಿಯ ಚಿಕಿತ್ಸೆಗಾಗಿ ಅರೆಶಿರೂರಿನಿಂದ ಮಂಗಳೂರು ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗಳೂರಿಗೆ ರವಾನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಅರೆಶಿರೂರಿನಿಂದ ಮಂಗಳೂರಿಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗೊಳಿಹೊಳೆ ಗ್ರಾಮದ ಅರೆಶಿರೂರಿನ ಆರನೇ ತರಗತಿ ವಿಧ್ಯಾರ್ಥಿನಿ, ಕಪ್ಪಾಡಿ ಶಾಲೆಯ ಮುಖ್ಯಶಿಕ್ಷಕ ಸಂಜೀವ ಗೌಡ ಅವರ ಮಗಳು ಅನುಷಾ ಗೌಡ (11) ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದಲ್ಲಿ ಸ್ಪಲ್ಪ ಮಟ್ಟಿನ ಸುಧಾರಣೆ ಕಂಡ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಕೆಗೆ ಮತ್ತೆ ನೋವು ಹೆಚ್ಚಾಗಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ ಕರ್ನಾಟಕ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರನ್ನು ಸಂಪರ್ಕಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ರವಿ ಶೆಟ್ಟಿ ಬಾಲಕಿಯ ಚಿಕಿತ್ಸೆಯ ವಿವರಗಳನ್ನು ಬೆಂಗಳೂರಿನ ವೈದ್ಯರಿಗೆ ತಲುಪಿಸಿದಾಗ ಕೂಡಲೇ ಚಿಕಿತ್ಸೆಗೆ ಕರೆತಂದರೆ ಯಕೃತ್ತಿನ ಕಸಿ ಚಿಕಿತ್ಸೆ ನೀಡಬಹುದು. ಚಿಕಿತ್ಸೆಗೆ 25ಲಕ್ಷ ಹಣ ಖರ್ಚಾಬಹುದೆಂದು ತಿಳಿಸಿದ್ದರು. ವೈದ್ಯರಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ಝೀರೋ ಟ್ರಾಫಿಕ್‌ಗಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಮಂಗಳೂರಿಗೆ ತಲುಪುವ ತನಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಝೀರೋ ಟ್ರಾಫಿಕ್‌ಗೆ ಸಮ್ಮತಿ ಸೂಚಿಸಿದ್ದರಿಂದ ಕೂಡಲೇ ಬೈಂದೂರು ಉಡುಪಿ ಮೂಲಕ ಬಾಲಕಿಯನ್ನು ಚಿಕಿತ್ಸೆಗಾಗಿ ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.

ಒಂದು ಪೊಲೀಸ್ ವಾಹನ ಮತ್ತು ಆಂಬುಲೆನ್ಸ್ ಅತೀವೇಗದಲ್ಲಿ ಮಂಗಳೂರಿನ ಬಜ್ಪೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ 1 ಗಂಟೆಯ ಜೆಟ್ ಏರ್ ವೇಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ರವಾನೆ ಮಾಡಲಾಯಿತು. ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಆಪರೇಷನ್ ನಡೆಸಲಾಗಿದೆ. ಬೆಂಗಳೂರು ವೈದ್ಯರು ಉಡುಪಿಗೆ ಬಂದು ಶಸ್ತ್ರಚಿಕಿತ್ಸೆ ಕೊಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಶಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬೈಂದೂರಿನಿಂದ ಕುಂದಾಪುರ- ಉಡುಪಿ, ಪಡುಬಿದ್ರೆ ಮಾರ್ಗವಾಗಿ ಮೂಲ್ಕಿವರೆಗೆ ಉಡುಪಿ ಜಿಲ್ಲಾ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಉಡುಪಿಯ ಗಡಿ ದಾಟಿ ಮಂಗಳೂರಿಗೆ ಬಂದ ಕೂಡಲೇ ಪೊಲೀಸರು ಅಸಹಾಕಾರ ತೋರಿದ್ದಾರೆ. ಮಾಮೂಲಿಯಂತೆ ಟ್ರಾಫಿಕ್ ರಸ್ತೆ ಆಂಬುಲೆನ್ಸ್‌ಗೆ ಕಿರಿಕಿರಿ ಮಾಡಿದೆ. ವೇಗವಾಗಿ ಮಂಗಳೂರು ವಿಮಾನ ನಿಲ್ದಾಣ ರೀಚ್ ಆಗಬೇಕಿದ್ದ ಆಂಬುಲೆನ್ಸ್ ತಡವಾಗಿ ತಲುಪಿತು.

ಬಾಲಕಿಯ ಕುಟುಂಬಿಕರಿಗೆ ಆರ್ಥಿಕ ಅಡಚಣೆ ಇರುವುದರಿಂದ ದೊಡ್ಡ ಮೊತ್ತವನ್ನು ಭರಿಸಲು ಪರದಾಡುತ್ತಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಭರಿಸಲು ದಾನಿಗಳಿಂದ ನೆರವು ಕೋರಿದ್ದಾರೆ.

ನೆರವುನೀಡಲಿಚ್ಚಿವುವವರು ಸಂಪರ್ಕಿಸುವುದು:
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಡ್ತರೆ
ಹೆಸರು: ಸಂಜು ಗೌಡ
ಖಾತೆ ಸಂಖ್ಯೆ: 54057877495

ಮಾಹಿತಿಗಾಗಿ: 9448595101

ಬಾಲಕಿಯ ಚಿಕಿತ್ಸೆಯ ತುರ್ತು ತಿಳಿದ ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮನವಿ ಮಾಡಿ ಮಂಗಳೂರು ಏರ್‌ಪೋರ್ಟ್ ಮೂಲಕ ಬೆಂಗಳೂರು ಆಸ್ಪತ್ರೆಗೆ ಸಾಗಿಸಲು ಮುಂದಾದೆವು. ಮಂಗಳೂರಿನ ತನಕವೂ ಶೂನ್ಯ ಸಂಚಾರ ಮಾಡಲು ನೆರವಾದ ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಡ ಕುಟುಂಬಕ್ಕೆ ನೆರವು ನೀಡಲು ನನ್ನ ಚಿನ್ನವನ್ನು ಅಡವಿಟ್ಟು 2ಲಕ್ಷ ಹಣ ನೀಡಿದ್ದೇವೆ. ಆದರೆ ಚಿಕಿತ್ಸೆಗೆ ೨೫ಲಕ್ಷ ಹಣ ಬೇಕಿರುವುದರಿಂದ ಆ ಕುಟುಂಬಕ್ಕೆ ಊದಾರಿಗಳು ನೆರವಾಗಬೇಕಿದೆ. – ರವಿಶೆಟ್ಟಿ, ಕರ್ನಾಟಕ ಕಾರ್ಮಿಕ ವೇದಿಕೆ

Exit mobile version