Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ: ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರಂತವಾಗಿ ಶ್ರಮಿಸಲಾಗುತ್ತಿದೆ. ಸೋಮೇಶ್ವರ ಬೀಚ್ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಅನುದಾನ ನೀಡಲಾಗಿದ್ದು, ಮೊದಲ ಹಂತದ ಕಾಮಗಾರಿ ಈಗಾಗಲೇ ನಡೆದಿದ್ದು, ಎರಡನೇ ಹಂತದ ಅನುದಾನ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಬೈಂದೂರು ಬೀಚ್ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ತಾಲೂಕು ಹಂತ ಹಂತವಾಗಿ ಅಭಿವೃದ್ಧಿಯಾಗಲಿದ್ದು, ಆಡಳಿತಾತ್ಮಕ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ನಿವೃತ್ತ ಐ.ಎಫ್.ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಶ್ಚಿಮಘಟ್ಟ ಹಾಗೂ ಅರಬ್ಬಿ ಸಮುದ್ರದ ನಡುವೆ ಇರುವ ಸುಂದರ ಪ್ರದೇಶ ಮನಮೋಹಕವಾಗಿದ್ದು ಪ್ರಕೃತಿದತ್ತವಾಗಿ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿದೆ. ಇದರನ್ನು ಅಭಿವೃದ್ದಿಪಡಿಸುವ ಕೆಲಸ ಹೆಚ್ಚಾಗಿ ಆಗಬೇಕಿದೆ. ಬೈಂದೂರು ತಾಲೂಕು ಹೋರಾಟದಕ್ಕೆ ಅಂತಿಮವಾಗಿ ಜಯ ದೊರೆತಿದ್ದು, ತಾಲೂಕಾಗಿ ಮಾರ್ಪಾಡಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಜಿ.ಪಂ ಸದಸ್ಯ ಸುರೇಶ ಬಟವಾಡಿ, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಪಡುವರಿ ಗ್ರಾಪಂ ಅಧ್ಯಕ್ಷ ದೀಪಾ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಚಿತ್ತೇರಿ ಡೆವಲಪರ್ಸ್’ನ ಸುಖಾನಂದ ಶೆಟ್ಟಿ, ಉದ್ಯಮಿ ರಾಮಚಂದ್ರ ಪ್ರಭು, ಮಾಜಿ ತಾಪಂ ಸದಸ್ಯ ರಾಮ ಸೋಡಿತಾರ್, ಉದ್ಯಮಿ ಗೋಪಾಲಕೃಷ್ಣ ಕಲ್ಮಕ್ಕಿ, ವಿಶ್ವ ಹಿಂದೂರು ಪರಿಷತ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು, ಬೆಸುಗೆ ಫೌಂಡೇಶನ್ ಉಪಾಧ್ಯಕ್ಷ ಜಯಾನಂದ ಹೋಬಳಿದಾರ್, ಕೋಶಾಧ್ಯಕ್ಷ ಗೋಪಾಲಕೃಷ್ಣ ಶಿರೂರು, ಸದಸ್ಯರಾದ ರಿಯಾಜ್ ಅಹಮ್ಮದ್, ಪ್ರಸಾದ್ ಪ್ರಭು, ಭಿಮೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬೆಸುಗೆ ಫೌಂಡೇಶನ್ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬೈಂದೂರಿನ ಪ್ರವಾಸಿ ತಾಣಗಳನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವುದು ಮತ್ತು ಎಲ್ಲರಿಂದಿಗೆ ಕೊಂಡಿಯಾಗಿ ಕೆಲಸ ಮಾಡಿ ಊರಿನ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ನಿರಂತರ ಶ್ರಮಿಸುವ ಉದ್ದೇಶದಿಂದ ಬೆಸುಗೆ ಫೌಂಡೇಶನ್ ಹುಟ್ಟುಹಾಕಲಾಗಿದೆ. ಇಲ್ಲಿ ಯಾರಿಗೂ ರಾಜಕೀಯ ಆಕಾಂಕ್ಷೆ ಇಲ್ಲ. ನಮ್ಮೂರಿನ ಪ್ರಾಕೃತಿಕ ಸೌಂದರ್ಯವನ್ನು ವಿಶ್ವದ ಮುಂದೆ ತೆರೆದಿಡುವ ಮಹದಾಸೆ ಇದೆ ಎಂದರು.

ಬೀಚ್ ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ ಸ್ವಾಗತಿಸಿದರು. ಕಾರ್ಯದರ್ಶಿ ಗಣಪತಿ ಹೋಬಳಿದಾರ್ ವಂದಿಸಿದರು. ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

 

Exit mobile version