ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಭಗವಂತನನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡಿದರೆ ಅವನು ನಮ್ಮ ಯೋಗ ಕ್ಷೇಮ ನೋಡಿಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಾಮಾಣಿಕ ಪ್ರಯತ್ನ ಎರಡೂ ಇರಬೇಕು. ಯೋಗ ಮತ್ತು ಕ್ಷೇಮ ನಮಗೆ ಎರಡು ಕಣ್ಣುಗಳಿದ್ದಂತೆ. ಯೋಗ ಕ್ಷೇಮ ಎರಡೂ ನಮಗೆ ದೊರೆತರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ನೀತಿ, ನಿಯಮದ ಜೊತೆಗೆ ಆರೋಗ್ಯ ಕೂಡ ಉತ್ತಮವಾಗಬೇಕು. ಶ್ರೀ ದೇವರ ಅನುಗ್ರಹದಿಂದ ಕಳೆದ ೧೪ ವರ್ಷಗಳ ಹಿಂದೆ ಪ್ರಾರಂಭಿಸಿದ ಚಿಣ್ಣರ ಸಂತರ್ಪಣೆಯನ್ನು ಶ್ರೀ ಕೃಷ್ಣನ ಪ್ರಸಾದ ರೂಪದಲ್ಲಿ ಮಕ್ಕಳಿಗೆ ನೀಡುತ್ತಾ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ೨೦೧೮ನೇ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠವನ್ನಲಂಕರಿಸಲಿರುವ ಶ್ರೀ ಪಲಿಮಾರು ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹೇಳಿದರು.
ಪರ್ಯಾಯ ಪೂರ್ವ ಸಂಚಾರ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯು ನೂತನ ಕಟ್ಟಡ ನಿರ್ಮಾಣದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ ಅಲ್ಲದೆ ವಿದ್ಯಾರ್ಥಿಗಳ ಅಂಕಗಳ ಮೌಲ್ಯ ಕೂಡ ಬೆಳೆದಿರುವುದು ಶ್ಲಾಘನೀಯ. ನಿಷ್ಕಲ್ಮಶ ಮನಸ್ಸಿನ ಎಲ್ಲಾ ಮಕ್ಕಳು ದೇವರಿಗೆ ಸಮಾನರು. ಇಂತಹ ಮಕ್ಕಳಿಗೆ ಮಧ್ಯಾಹ್ನದ ಸಂತರ್ಪಣೆ ಕಾರ್ಯವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುವ ಶಾಲೆಯ ಆಡಳಿತ ಮಂಡಳಿಯವರು ಅಭಿನಂದನಾರ್ಹರು ಎಂದು ಅವರು ಹೇಳಿದರು.
ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸದಸ್ಯರಾದ ಜಿ.ವೆಂಕಟೇಶ ನಾಯಕ್, ಎಂ.ವಿನೋದ ಪೈ, ಕೆ.ರಾಮನಾಥ ನಾಯಕ್, ಎನ್.ಅಶ್ವಿನ್ ನಾಯಕ್, ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಉಡುಪಿ ಜಿಲ್ಲಾ ಶ್ರೀಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆಯ ಶಾಲೆಗಳ ಒಕ್ಕೂಟದ ಅಧ್ಯಕ್ಷ ಅಶೋಕ ಮಾಡಾ, ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಬಾಲಚಂದ್ರ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್, ನಿವೃತ್ತ ಅಕ್ಷರ ದಾಸೋಹ ಅಧಿಕಾರಿ ವಸಂತ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕೊಕ್ಕರ್ಣೆ, ಶ್ರೀಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆಯ ಉಸ್ತುವಾರಿ ಶ್ರೀನಿವಾಸ ರಾವ್, ಮಂಜುನಾಥ ಖಾರ್ವಿ, ರವೀಂದ್ರ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.
ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಸ್ವಾಗತಿಸಿದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕ ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.