Kundapra.com ಕುಂದಾಪ್ರ ಡಾಟ್ ಕಾಂ

ಅಂತರ್ಜಾಲ ಬಳಕೆದಾರರಿಗೆ ನಿಯಂತ್ರಣದ ಕಂಟಕ

ಇಂಟರ್ನೆಟ್ ಬಳಕೆದಾರರಿಗೆ ಹೊಸ ಕಂಟಕವೊಂದು ಎದುರಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳೆದ್ದಿದೆ. ನಿಮ್ಮಿಷ್ಟದ ತಾಣಗಳನ್ನು ವೀಕ್ಷಿಣೆಯನ್ನು ನಿಯಂತ್ರಿಸಲು ಮೊಬೈಲ್ ಸೇವಾ ಕಂಪೆನಿಗಳು ಮುಂದಾಗಿರುವ ಪರಿಣಾಮ ಅಂತರ್ಜಾಲವನ್ನು ಅವಲಂಬಿಸಿರುವ ವ್ಯವಹಾರಗಳು ದುಬಾರಿಯಾಗಬಹುದು ಅಥವಾ ನಿಮ್ಮ ಇಷ್ಟದ ಅಂತರ್ಜಾಲ ತಾಣಗಳು ತೆರೆದುಕೊಳ್ಳದೆ ಇರಬಹುದು. ಒಂದು ವೇಳೆ ಅದು ತೆರೆದುಕೊಂಡರೂ ಹೆಚ್ಚಿಗೆ ಸಮಯ ತೆಗೆದುಕೊಳ್ಳಬಹುದು. ಹೀಗೆ ಜಾಲತಾಣಿಗರ ಸ್ವಾತಂತ್ರ್ಯವನ್ನು ಹಿಡಿದಿಡುವ ಪ್ರಯತ್ನಕ್ಕೆ ಮೊಬೈಲ್ ಸೇವಾ ಕಂಪೆನಿಗಳು ಮುಂದಾಗಿರುವುದಕ್ಕೆ ಭಾರತ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ.

ಹೇಗಿದು?
ಸೇವಾ ಕಂಪೆನಿಗಳು ತಮಗೆ ಹಣ ನೀಡುವ ಕಂಪೆನಿಗಳ ವೆಬ್‍ಸೈಟ್‍ನ್ನು ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಆ ಕಂಪೆನಿಗಳ ವೆಬ್‍ಸೈಟ್‍ನ್ನು ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಸೇವಾ ಕಂಪೆನಿಗಳ ಈ ನಿಯಂತ್ರಿತ ನಡೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು ನೆಟ್ ನ್ಯೂಟ್ರಾಲಿಟಿಗೆ ಆಗ್ರಹಿಸುತ್ತಿದ್ದಾರೆ.

ಸರಕಾರದ ನಡೆ ಏನು?
ನೆಟ್‍ನ್ಯೂಟ್ರಾಲಿಟಿ ಬಗ್ಗೆ ಚರ್ಚೆಗಳು ಆರಂಭವಾದ ಬಳಿಕ ಕೇಂದ್ರ ಸರ್ಕಾರ ಜನವರಿ ತಿಂಗಳಿನಲ್ಲಿ ಆರು ಜನರ ಸದಸ್ಯರ ಒಂದು ತಂಡವನ್ನು ರಚಿಸಿತ್ತು. ಆ ತಂಡ ಈಗ ಟ್ರಾಯ್‍ಗೆ ವರದಿ ನೀಡಿದ್ದು, ಆ ವರದಿಯನ್ನು ಟ್ರಾಯ್‍ಗೆ ಸಲ್ಲಿಸಿದ್ದು, ಟ್ರಾಯ್ ತನ್ನ ವೆಬ್‍ಸೈಟ್‍ನಲ್ಲಿ ಮಾ.27ರಂದು ಜನರಿಗೆ ಅರ್ಥವಾಗದ ಹೆಡ್‍ಲೈನ್‍ನಲ್ಲಿ ವರದಿಯನ್ನು ಪ್ರಕಟಿಸಿದೆ. ಈ ವರದಿಗೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗಡೆ ಪ್ರತಿಕ್ರಿಯೆ ಬಂದಲ್ಲಿ ಟ್ರಾಯ್ ಮತ್ತೊಮ್ಮೆ ಪರಿಶೀಲಿಸುವ ಸಾಧ್ಯತೆ ಇದೆ. ಒಂದೊಮ್ಮೆ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಇದು ಅಧಿಕೃತವಾಗಿ ಜಾರಿಯಾಗಲಿದೆ.

ಸೇವಾಕಂಪೆನಿಗಳ ಮೋಸ ಗೊತ್ತಾಗುತ್ತಿದ್ದಂತೆ ಅಮೆರಿಕದಲ್ಲೂ ಪ್ರತಿಭಟನೆ ನಡೆದಿತ್ತು. ನೆಟ್ಟಿಗರ ಪ್ರತಿಭಟನೆ ಮಣಿದ ಅಮೆರಿಕ ಸರ್ಕಾರ ನೆಟ್ ಸಮಾನತೆಗಾಗಿ ಒಂದು ವಿಧೇಯಕವನ್ನು ಮಂಡಿಸಿ ಸೆನೆಟ್‍ನಲ್ಲಿ ಅಂಗೀಕರಿಸಿತು.

ನೆಟ್ ನ್ಯೂಟ್ರಾಲಿಟಿ ಅಂದರೆ…
ಸೇವಾ ಪೂರೈಕೆದಾರರಿಂದ ಡೇಟಾ ಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ವೆಬ್‍ಸೈಟ್‍ಗಳು ಹಾಗು ಆಪ್‍ನ್ನು ಮುಕ್ತವಾಗಿ ಬಳಸುವುದೇ ನೆಟ್‍ನ್ಯೂಟ್ರಾಲಿಟಿ.

ನೀವೇನು ಮಾಡಬೇಕು?
ನೆಟ್‍ನ್ಯೂಟ್ರಾಲಿಟಿಗಾಗಿ ನೀವು ಟ್ರಾಯ್‍ಗೆ ಮನವಿ ಮಾಡಬಹುದು ಅಥವಾ ಸೇವ್ ಇಂಟರ್‍ನೆಟ್ ಮೂಲಕ ಟ್ರಾಯ್‍ಗೆ ಸುಲಭವಾಗಿ ಮನವಿ ಸಲ್ಲಿಸಬಹುದು. ಮನವಿ ಸಲ್ಲಿಸಲು ಲಿಂಕ್: http://www.savetheinternet.in/

Exit mobile version