Kundapra.com ಕುಂದಾಪ್ರ ಡಾಟ್ ಕಾಂ

ಜಾಲಾಡಿಯಲ್ಲಿ ರಾಜ್ಯಮಟ್ಟದ ‘ಜಟ್ಟಿಗೇಶ್ವರ ಕ್ರಿಕೆಟ್’ ಪಂದ್ಯಾಟ: ಜೈ ಕರ್ನಾಟಕ ತಂಡ ಚಾಂಪಿಯನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾಲಾಡಿಯ ಜೆಸಿಸಿ ಕ್ರಿಕೆಟ್ ಕ್ಲಬ್ ಜಾಲಾಡಿಯ ಜೆಸಿಸಿ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಈಗಲ್ಸ್ ಕುಂಭಾಶಿ ತಂಡವನ್ನು ೧೭ ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಬೆಂಗಳೂರಿನ ಜೈ ಕರ್ನಾಟಕ ತಂಡ ‘ಜಟ್ಟಿಗೇಶ್ವರ ಕ್ರಿಕೆಟ್’ ಟ್ರೋಫಿಯನ್ನು ಗೆದ್ದುಕೊಂಡಿದೆ.

ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಬೂನ್ ಸಾರಥ್ಯದ ಜೈ ಕರ್ನಾಟಕ ತಂಡವು ೬ ಓವರ್‌ಗಳ ಅಂತ್ಯಕ್ಕೆ ೩ ವಿಕೆಟ್ ಕಳೆದುಕೊಂಡು ೫೧ ರನ್ ಪೇರಿಸಿತು. ಗುರಿ ಬೆನ್ನತ್ತಿದ ಸುಧಾಕರ ನಾಯಕತ್ವದ ಈಗಲ್ಸ್ ಕುಂಭಾಶಿ ತಂಡ ನಿಗದಿತ ಓವರ್‌ಗಳ ಅಂತ್ಯಕ್ಕೆ ೩ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಲಷ್ಟೇ ಶಕ್ತವಾಗಿ, ೧೭ ರನ್‌ಗಳಿಂದ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.

ವಿಜೇತ ಜೈ ಕರ್ನಾಟಕ ತಂಡ ೧.೨೫ ಲಕ್ಷ ರೂ., ರನ್ನರ್‌ಅಪ್ ಈಗಲ್ಸ್ ತಂಡ ೬೫ ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಪಡೆಯಿತು. ೩೦ ತಂಡಗಳು ಭಾಗಿ ೪೦ ಯಾರ್ಡ್‌ನ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳ ಒಟ್ಟು ೩೦ ತಂಡಗಳು ಆಡಳಿಲಿದಿದ್ದು, ಮೊದಲ ದಿನದ ಪಂದ್ಯಾವಳಿಯಲ್ಲಿ ಗಿಳಿಯಾರ ನಾಗ ಸಾರಥ್ಯದ ಸ್ಥಳೀಯ ತಂಡ ಫ್ರೆಂಡ್ಸ್ ಜಾಲಾಡಿ ಹಾಗೂ ಈಗಲ್ಸ್ ಕುಂಭಾಶಿ ಸೆಮಿಫೈನಲ್‌ಗೇರಿದರೆ, ಎರಡನೇ ದಿನ ಜೈ ಕರ್ನಾಟಕ ಹಾಗೂ ಸಂತೋಷ್ ನೇತೃತ್ವದ ಅಜಯ್ ಕುಂಜುಗುಡಿ ಸಾಲಿಗ್ರಾಮ ತಂಡಗಳು ಉಪಾಂತ್ಯ ಪ್ರವೇಶಿಸಿದವು.

ಫ್ರೆಂಡ್ಸ್ ಜಾಲಾಡಿ ಹಾಗೂ ಈಗಲ್ಸ್ ಕುಂಭಾಶಿ ನಡುವಿನ ಮೊದಲ ಸೆಮಿ ಟೈ ಆಗಿ, ಸೂಪರ್ ಓವರ್‌ನಲ್ಲಿ ಈಗಲ್ಸ್‌ಗೆ ಅದೃಷ್ಟ ಒಲಿಯಿತು. ಎರಡನೇ ಸೆಮಿಯಲ್ಲಿ ಕುಂಜಿಗುಡಿ ತಂಡವನ್ನು ಮಣಿಸಿದ ಜೈ ಕರ್ನಾಟಕ ಫೈನಲ್‌ಗೇರಿತು.

ಜೈ ಕರ್ನಾಟಕ ತಂಡದ ವೇಲಾ ಸರಣಿಶ್ರೇಷ್ಠ, ಮೊಸಿನ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ, ಬೂನ್ ಬೆಸ್ಟ್ ಬೌಲರ್, ಈಗಲ್ಸ್‌ನ ಜಯಂತ್ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾದರು.

ರಾಜ್ಯಮಟ್ಟದ ಪಂದ್ಯಾಟಕ್ಕೆ ಚಾಲನೆ
ಜಾಲಾಡಿಯ ಜೆಸಿಸಿ ಮೈದಾನದಲ್ಲಿ ಜೆಸಿಸಿ ಕ್ರಿಕೆಟ್ ಕ್ಲಬ್ ಜಾಲಾಡಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ‘ಜಟ್ಟಿಗೇಶ್ವರ ಕ್ರಿಕೆಟ್’ ಪಂದ್ಯಾವಳಿಯನ್ನು ಬಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಕ್ರಿಕೆಟ್ ಪಂದ್ಯ ಆಡುವುದರೊಂದಿಗೆ ಚಾಲನೆ ನೀಡಿದರು.

ಬಳಿಕ ಗೋಪಾಲ ಪೂಜಾರಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಅಶಕ್ತರಿಗೆ ನೆರವಾಗುವ ಮೂಲಕ ಕೇವಲ ಮೋಜಿಗಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸದೆ, ಸಾಮಾಜಿಕ ಕಳಕಳಿಗೆ ಒತ್ತು ನೀಡಿರುವ ಜೆಸಿಸಿ ಕ್ರಿಕೆಟ್ ಕ್ಲಬ್‌ನ ಕಾರ್ಯ ಶ್ಲಾಘನೀಯ ಎಂದರು.
ಸಾಧಕ ಕ್ರೀಡಾಳುಗಳಿಗೆ ಸಮ್ಮಾನ

ಈ ಸಂದರ್ಭದಲ್ಲಿ ಕುಂದಾಪುರದ ಸಾಧಕ ಕ್ರೀಡಾಪಟುಗಳಾದ ಅಂತರಾಷ್ಟ್ರೀಯ ವೇಟ್‌ಲಿಫ್ಟರ್ ವಿಶ್ವನಾಥ ಭಾಸ್ಕರ್ ಗಾಣಿಗ ಬಾಳಿಕೆರೆ ಹಾಗೂ ರಾಷ್ಟ್ರೀಯ ವಾಲಿಬಾಲ್ ಪಟು ರೈಸನ್ ಮೂವತ್ತುಮುಡಿ ಅವರನ್ನು ಸಮ್ಮಾನಿಸಲಾಯಿತು.

ಬಿಜೆಪಿ ರಾಜ್ಯ ಕಾರ‍್ಯಕಾರಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ರಾಜು ದೇವಾಡಿಗ, ಕಂಟ್ರಾಕ್ಟರ್ ಕೆ.ಆರ್. ನಾಯ್ಕ್, ಕಂಡ್ಲೂರು ಎಸ್‌ಐ ಶ್ರೀಧರ್ ನಾಯ್ಕ್, ಜೆಡಿಎಸ್ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ, ಜೆಡಿಎಸ್ ಅಲ್ಪಸಂಖ್ಯಾಕ ಘಟಕದ ಕಾರ‍್ಯಧ್ಯಕ್ಷ ಮನ್ಸೂರ್ ಇಬ್ರಾಹಿಂ, ಹೆಮ್ಮಾಡಿ ದೇವಸ್ಥಾನದ ಅರ್ಚಕ ಗಜೇಂದ್ರ ಹೊಳ್ಳ, ಚಂದ್ರ ನಾಯ್ಕ್, ನಾರಾಯಣ ದೇವಾಡಿಗ, ಚಂದ್ರಶೇಖರ್ ಅರಾಟೆ, ರಮೇಶ್ ದೇವಾಡಿಗ, ಕೃಷ್ಣ ಪೂಜಾರಿ ಭಟ್ರಬೆಟ್ಟು ಉಪಸ್ಥಿತರಿದ್ದರು.

ಜೆಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ವಿನಯ್ ಉದ್ಯಾವರ ಕಾರ‍್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್, ಉದ್ಯಮಿ ರಮೇಶ್ ದೇವಾಡಿಗ, ತಾ.ಪಂ. ಸದಸ್ಯ ರಾಜು ದೇವಾಡಿಗ, ಚಂದ್ರ ನಾಕ್, ಟಿ.ಕೆ. ಕೋಟ್ಯಾನ್, ಅಂಬಿಕಾ ಆರ್. ಮೊಗವೀರ, ಸಂಜೀವ ದೇವಾಡಿಗ, ಜನಾರ್ದನ ಕೋಟ್ಯಾನ್, ರಾಘವೇಂದ್ರ ಕುಲಾಲ್, ನಾಗಾರಜ ಗಾಣಿಗ, ಚಂದ್ರಶೇಖರ್ ದೇವಾಡಿಗ, ತೇಜ ದೇವಾಡಿಗ, ರಾಘವೇಂದ್ರ ದೇವಾಡಿಗ ಮತ್ತಿತರರಿದ್ದರು.

 

Exit mobile version