Kundapra.com ಕುಂದಾಪ್ರ ಡಾಟ್ ಕಾಂ

ಮೊಗೇರಿಯಲ್ಲಿ ಅಡಿಗರ ನೆನಪಿನಲ್ಲಿ ಕಲಾಗ್ರಾಮ ನಿರ್ಮಾಣಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನವ್ಯ ಕವಿ ಪ್ರೋ. ಮೊಗೇರಿ ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿಯ ಅಂಗವಾಗಿ ಅವರ ಹುಟ್ಟೂರಾದ ಮೊಗೇರಿಯಲ್ಲಿ ಕಲಾಗ್ರಾಮ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪ್ರೋ. ಎಸ್.ಜಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸರಕಾರಿ ಶಾಲೆಯ ಸಬಲೀಕರಣಕ್ಕಾಗಿ ೨೦೧೭ರಲ್ಲಿ ಅಸ್ತಿತ್ವಕ್ಕೆ ಬಂದ ೨೧ ಶಿಫಾರಸ್ಸುಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುವಂತೆ ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಪುಂಡಲೀಕ ಹಾಲಂಬಿ ಸಭಾಂಗಣ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ೧೨ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ-೨೦೧೮ರಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಎ. ಈಶ್ವರಯ್ಯ, ಕನ್ನಡದಲ್ಲಿ ಪ್ರತಿಭಾವಂತ ಬರಹಗಾರರು, ಕಾದಂಬರಿಕಾರರು ಇದ್ದು, ಭಾಷೆ ಮುಳುಗೀತು ಎನ್ನುವುದರಲ್ಲಿ ಅರ್ಥವಿಲ್ಲ, ಆದರೂ ಇಂದು ಭಾಷೆ ಬೆಳೆಯಲು ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ. ನವೋದಯ ಕಾಲದಲ್ಲಿದ್ದ ಶಿಸ್ತು ಈಗಿಲ್ಲ, ಆ ಕಾಲದಲ್ಲಿದ್ದ ಭಾಷೆಯ ಮೇಲಿನ ಪ್ರೀತಿ ಈಗ ಇದೆಯೇ ನಮ್ಮ ಪ್ರಶ್ನೆ ಕಾಡುತ್ತಿದೆ ಎಂದರು.

ಕನ್ನಡ ಭಾಷೆಯ ಬೆಳವಣೆಗಾಗಿ ಪತ್ರಿಕೆಗಳು ಒತ್ತಮ ಕೆಲಸ ಮಾಡುತ್ತಿದ್ದು, ಸುಮಾರು ೨೦೦ರಿಂದ ೩೦೦ ಪದಗಳನ್ನು ಸೃಷ್ಟಿಸಿದೆ ಎಂದ ಅವರು ಭಾಷೆಯು ನಮ್ಮ ಸಂಸ್ಕೃತಿಯ ದಾರಿಯನ್ನು ತೋರಿಸುವ ರೇಖೆಯಾಗಿದೆ. ಇಂದು ಪುಸ್ತಕ ಮೇಲಿನ ಪ್ರೀತಿ ಕಡಿಮೆಯಾಗಿದ್ದು, ಆರ್ಥಿಕತೆಯ ದೃಷ್ಟಿಯಿಂದಾಗಿ ಯುವ ಪೀಳಿಗೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ, ಇದು ಸಲ್ಲದು, ಭಾಷೆ ಕೌಟಂಬಿಕವಾಗಿ ಬೆಳೆದಾಗ ಮಾತ್ರ ಅದು ಉಳಿಯಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ. ಎಚ್. ಶಾಂತರಾಮ್ ಪ್ರತಿಸ್ಪಂದನ ನೀಡಿದರು.

ಶ್ರೀಮತಿ ಎಚ್. ಶಾಂತರಾಮ್, ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್, ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲ ಉಮೇಶ ಎನ್ ರಾಯ್ಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ, ಜಿಲ್ಲಾ ಗ್ರಂಥಾಲಯಾಕಾರಿ ನಳಿನಿ, ಬಿಇಓ ಓ. ಆರ್ ಪ್ರಕಾಶ, ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ಕೆರ್ಗಾಲ್ ಗ್ರಾ.ಪಂ. ಉಪಾಧ್ಯಕ್ಷ ಸುಂದರ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಸಾಧಕರಾದ ತಲ್ಲೂರು ಶಿವರಾಮ ಶೆಟ್ಟಿ, ಮುಲ್ಲಡ್ಕ ಗುರುಪ್ರಸಾದ ಸುಧಾಕರ ಶೆಟ್ಟಿ, ಯು.ಎಸ್. ಶೆಣೈ ಕುಂದಾಪುರ, ಎನ್. ಗುರುರಾಜ ಮಣಿಪಾಲ, ಸುಹೇಲ್ ಬಾಷಾ ಸಾಹೇಬ್, ಗುರುವ ಕೊರಗ ಹಿರಿಯಡ್ಕ, ಚಂದ್ರನಾಥ ಬಜಗೋಳಿ, ಚಂದ್ರಾಕರ್ ಕಾಮತ್, ಮಂಜುನಾಥ ಮಧ್ಯಸ್ಥ, ಮ.ನಾ. ಹೆಬ್ಬಾರ್, ಯಾಕೂಬ್ ಖಾದರ್ ಗುಲ್ವಾಡಿ, ವೆಂಕಟೇಶ ಪೈ, ಹಾಗೂ ವಾಗ್ಜೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಸಂಸ್ಥೆಯ ಪರವಾಗಿ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಕಿಶೋರ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು, ನರೇಂದ್ರ ಕೋಟ ಸ್ವಾಗತಿಸಿ, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ ಸುಧಾಕರ ಶೆಣೈ ವಂದಿಸಿದರು.

 

Exit mobile version