Site icon Kundapra.com ಕುಂದಾಪ್ರ ಡಾಟ್ ಕಾಂ

ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕ ಪ್ರಕಾಶ ರಾವ್ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ, ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಸಂಸ್ಥಾಪಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಾಯೋಜಕ ಕೆ. ಎಸ್. ಪ್ರಕಾಶ ರಾವ್ (77) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಖಂಬದಕೋಣೆಯ ಹಿಂದಿನ ತಲೆಮಾರಿನ ಧುರೀಣ ಆರ್. ಕೆ. ಸಂಜೀವ ರಾವ್-ಸುಶೀಲಾ ರಾವ್ ದಂಪತಿಯ ಪುತ್ರರಾದ ಪ್ರಕಾಶ ರಾವ್ ಪದವಿ ಶಿಕ್ಷಣದ ಬಳಿಕ ಮುಂಬೈ ಕೆನರಾ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿ, ಬಳಿಕ ಸಿಂಡಿಕೇಟ್ ಬ್ಯಾಂಕ್ ಸೇರಿ ಮಣಿಪಾಲ ಧಾರವಾಡ, ನವದೆಹಲಿ, ಕೊಲ್ಕತ್ತದಲ್ಲಿ ಕೆಲಸ ಮಾಡಿದರು, ಕೊಲ್ಕತ್ತ, ನವದೆಹಲಿಯಲ್ಲಿ ವಲಯ ಪ್ರಬಂಧಕರಾಗಿ ದುಡಿದ ಬಳಿಕ ಪ್ರಧಾನ ಕಚೇರಿಯಲ್ಲಿ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಹೃದಯಿಗಳೂ, ಪರೋಪಕಾರಿಗಳೂ ಆಗಿದ್ದ ಅವರು ಸೇವಾವಧಿಯಲ್ಲಿ ಸಹೋದ್ಯೋಗಿಗಳ ಮತ್ತು ಸಾರ್ವಜನಿಕರ ಅಪಾರ ಪ್ರಶಂಸೆ ಗಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಲ್ಲಿ ಸಕ್ರಿಯರಾಗಿದ್ದ ಪ್ರಕಾಶ ರಾವ್ ಅದರ ರಾಜ್ಯಾಧ್ಯಕ್ಷರಾಗಿ ದುಡಿದಿದ್ದರು. ನೌಕರರ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ ಅವರು ಬೆಂಗಳೂರಿನಲ್ಲಿ 1983ರಲ್ಲಿ ಬ್ಯಾಂಕ್ ಅಧಿಕಾರಿಗಳ ಸಹಕಾರಿ ಗೃಹನಿರ್ಮಾಣ ಸಂಘವನ್ನು ಸ್ಥಾಪಿಸಿ, 8 ವರ್ಷ ಅದರ ಅಧ್ಯಕ್ಷರಾಗಿ ೫೦೦ ಮನೆಗಳನ್ನು ನಿರ್ಮಿಸಿರುವುದಲ್ಲದೆ ಇನ್ನೂ 500 ನಿವೇಶನಗಳನ್ನು ವಿತರಿಸಿದ್ದರು. ನಿವೃತ್ತಿಯ ಬಳಿಕ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.

ತಂದೆಯಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿ ಹೊಂದಿದ್ದ ರಾವ್ ಹುಟ್ಟೂರಾದ ಖಂಬದಕೋಣೆಯಲ್ಲಿ ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಮತ್ತು ಆರ್. ಕೆ. ಸಂಜೀವ ರಾವ್ ಎಜುಕೇಶನಲ್ ಅಂಡ್ ಕಲ್ಚರಲ್ ಅಕಾಡೆಮಿ ಸ್ಥಾಪಿಸಿ ಅದರ ಮೂಲಕ ಈಗ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿದರು. ಈ ಸಂಸ್ಥೆಗಳು ಸಾಹಿತ್ಯ, ಸಂಸ್ಕೃತಿ, ಕಲೆಪರವಾದ ಕಾರ್ಯಕ್ರಮಗಳನ್ನೂ ನಡೆಸುತ್ತಿವೆ. ಇವುಗಳ ನೇತೃತ್ವದಲ್ಲಿ ಕಳೆದ ವರ್ಷದುದ್ದಕ್ಕೆ ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆರ್. ಕೆ. ಸಂಜೀವ ರಾವ್ ಶತಮಾನೋತ್ಸವ ಆಚರಿಸಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರಕಾಶ ರಾವ್ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಇನಿಶಿಯೇಟಿವ್ ಫಾರ್ ಡೆವಲಪ್‌ಮೆಂಟ್ ಫೌಂಡೇಶನ್ ಬೆಂಗಳೂರು ಸೇರಿದಂತೆ ೬ ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಗ್ರಾಮೀಣ ಕೌಶಲಾಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಸಂಸ್ಥೆಯನ್ನು ನಬಾರ್ಡ್ ಅತ್ಯುತ್ತಮ ಸರ್ಕಾರೇತರ ಸಂಸ್ಥೆಯೆಂದು ಗುರಿತಿಸಿದೆ.

ಪ್ರಕಾಶ ರಾವ್ ಮೂವರು ಸಹೋದರಿಯರು, ಒಬ್ಬ ಸಹೋದರ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Exit mobile version