Kundapra.com ಕುಂದಾಪ್ರ ಡಾಟ್ ಕಾಂ

ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆಯ ಸ್ವಂತ ಕಟ್ಟಡ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಶೇ.೧೦೦ರಷ್ಟು ಕೃಷಿಸಾಲವನ್ನು ಮರುಪಾವತಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ಹತ್ತಾರು ಸಹಕಾರಿ ಸಂಸ್ಥೆಗಳು ಅವಿಭಜಿತ ಜಿಲ್ಲೆಯಲ್ಲಿ ಹುಟ್ಟಿಕೊಳ್ಳುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಸಹಕಾರಿ ರಂಗದಲ್ಲೂ ಪೈಪೋಟಿ ಇದ್ದಾಗಲೇ ಉತ್ತಮವಾಗಿ ಜನಸೇವೆ ಮಾಡಲು ಸಾಧ್ಯವಾಗಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಇಲ್ಲಿನ ಸಾಯಿ ಸೆಂಟರ್‌ನಲ್ಲಿ ಗುರುವಾರ ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದರು.

ಬ್ಯಾಂಕಿಂಗ್ ಕ್ಷೇತ್ರದ ನಿಯಮಗಳು ವಾಣಿಜ್ಯ ಬ್ಯಾಂಕುಗಳು ಹಾಗೂ ಸಹಕಾರಿ ಸಂಸ್ಥೆಗಳಿಗೆ ಒಂದೇಯಾಗಿದ್ದರೂ, ಬ್ಯಾಂಕುಗಳಿಗೆ ಸಮನಾಗಿ ಸಹಕಾರಿ ಸಂಸ್ಥೆಗಳು ಬೆಳೆದಿದ್ದರೂ ಕೇಂದ್ರ ಸರಕಾರ ಸಹಕಾರಿ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ನಬಾರ್ಡ್‌ನ ಹಣ ಸಹಕಾರಿ ಸಂಸ್ಥೆಗಳಿಗೆ ಶೇ.೪೦ರಷ್ಟು ಮಾತ್ರ ದೊರೆಯುತ್ತಿದೆ. ಆದರೆ ಶೇ.೬೦ರಷ್ಟನ್ನು ಸಹಕಾರಿ ಸಂಸ್ಥೆಯ ಸ್ವಂತ ಠೇವಣಿಯನ್ನು ಹೊಂದಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂಧಿಗಳ ತೊಡಗಿಸಿಕೊಳ್ಳುವಿಕೆಯಿಂದ ಸಂಸ್ಥೆಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಠೇವಣಿ ಹಾಗೂ ಸಾಲ ಸೌಲಭ್ಯ ಒದಗಿಸುವ ಮೂಲಕ ಸಹಕಾರಿ ರಂಗದಲ್ಲಿ ಸಂಸ್ಥೆ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದರು.

ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ಗಣಕೀಕರಣ ವ್ಯವಸ್ಥೆಯನ್ನು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ ನಾಯಕ್, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ದಿವಾಕರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಘುರಾಮ ಪೂಜಾರಿ, ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಖಂಬದಕೋಣೆ ರೈತರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಮಂಜು ಬಿಲ್ಲವ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಸಂಸ್ಥೆಯ ನಿರ್ದೇಶಕರುಗಳಾದ ಕೆ. ಶಂಕರ ಪೂಜಾರಿ, ಕಲ್ಪನಾ ಬಿ. ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್. ಅಣ್ಣಪ್ಪ ಪೂಜಾರಿ, ಜಯಸೂರ್ಯ ಪೂಜಾರಿ, ಪುಟ್ಟ ಎಂ. ಬಿಲ್ಲವ, ಶೇಖರ ಪೂಜಾರಿ, ಯು. ಕೇಶವ ಪೂಜಾರಿ, ಉದಯ ಜಿ. ಪೂಜಾರಿ ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕುಷ್ಟ ಬಿಲ್ಲವ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

Exit mobile version