ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಸೇವೆ, ದೇಶಭಕ್ತಿಯ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಅಗತ್ಯವಿದೆ. ಅಂಕಗಳಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿನ ಪ್ರಾವೀಣ್ಯತೆಯ ತೋರಿದಂತೆ ತಾವು ಬೆಳೆದ ಸಮಾಜಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕೆಂಬ ಬದ್ಧತೆ ಇದ್ದರೆ ಶಿಕ್ಷಣದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಟಿ. ನಾರಾಯಣ ಹೆಗ್ಡೆ ಹೇಳಿದರು.
ಅವರು ಶುಕ್ರವಾರ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಧ್ವಜಸ್ಥಂಭವನ್ನು ಉದ್ಘಾಟಿಸಿ, ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಬಳಿಕ ಮಾತನಾಡಿದರು.
ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಿದ್ದಿ ಉತ್ತಮ ಶಿಕ್ಷಣವನ್ನು ನೀಡಲು ಶಿಕ್ಷಕರ ಶ್ರಮ ಶ್ಲಾಘನೀಯವಾದ್ದು. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರೊಂದಿಗೆ, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳಿಗೂ ಇದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ಶಂಕರ ಪೂಜಾರಿ, ತಾ.ಪಂ ಸದಸ್ಯೆ ಮಾಲಿನಿ ಕೆ, ಗ್ರಾ.ಪಂ ಸದಸ್ಯೆ ಭವಾನಿ ಗಾಣಿಗ, ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ, ನಿವೃತ್ತ ಬ್ಯಾಂಕ್ ಅಧಿಕಾರಿ ಪ್ರೇಮಾನಂದ ಮಡಿವಾಳ, ಉದ್ಯಮಿ ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ, ರಾಜು ಹುದಾರ್, ರಾಜು ಹುಳವಾಡಿ, ಮೊದಲಾದವರು ವೇದಿಕೆಯಲ್ಲಿದ್ದರು.
ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸಂಗೀತ ವಂದಿಸಿದರು. ಶಿಕ್ಷಕಿ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ನೃತ್ಯವನ್ನು ಪ್ರದರ್ಶಿಸಿದಿದರು.