Kundapra.com ಕುಂದಾಪ್ರ ಡಾಟ್ ಕಾಂ

ರಾಜಿನಾಮೆ ನೀಡಲು ಸ್ಪೀಕರ್ ಭೇಟಿಗೆ ಹೊರಟ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದು ನಿಚ್ಚಳವಾಗಿದ್ದು ಸ್ಪೀಕರ್ ಕೆ. ಬಿ. ಕೋಳಿವಾಡ ಅವರನ್ನು ರಾಣಿಬೆನ್ನೂರಿನಲ್ಲಿ ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುವಾವಣೆಯಲ್ಲಿ ಮತ್ತೆ ಸ್ವರ್ಧಿಸುವ ಆಕಾಂಕ್ಷೆ ಹೊಂದಿದ್ದ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದಾಗಿ ಬಿಜೆಪಿ ಸೇರ್ಪಡೆಯಿಂದ ಈ ತನಕ ದೂರ ಉಳಿಸಿದ್ದರು. ಈ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ವರ್ಷದ ಹಿಂದೆ ಬಿಜೆಪಿ ಸಭೆಯಲ್ಲಿ ಸಭಿಕರ ಸಾಲಿನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಪಕ್ಷೇತರ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದರಾದರೂ ತಾಂತ್ರಿಕ ಕಾರಣಗಳಿಂದಾಗಿ ಸುಮ್ಮನುಳಿದಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆಯ ವೇಳೆ ಹಾಲಾಡಿ ಬಣ ಹಾಗೂ ಮೂಲ ಬಿಜೆಪಿಗರ ಬಣದ ನಡುವೆ ಜಟಾಪಟಿ ಉಂಟಾದ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷರು ಸಭೆಯಲ್ಲಿಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಮಂದಿನ ಕುಂದಾಪುರ ಬಿಜೆಪಿಯ ಅಭ್ಯರ್ಥಿ ಎಂದು ಘೋಷಿಸಿದ್ದರು. ಕುಂದಾಪುರ ಬಿಜೆಪಿಯಲ್ಲಿ ಒಂದು ಹಂತದಲ್ಲಿ ಪಕ್ಷದಲ್ಲಿ ಬಣ ರಾಜಕೀಯ ಉಲ್ಭಣಗೊಂಡು ಆರೋಪ ಪತ್ಯಾರೋಪ, ಕೇಸು, ಪದವಿಯಿಂದ ವಜಾ ಎಲ್ಲವೂ ನಡೆದುಹೋಗಿತ್ತು. ಈಗ ಶ್ರೀನಿವಾಸ ಶೆಟ್ಟಿ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸೂಚನೆ ನೀಡಿರುವುದರಿಂದ ಪಕ್ಷದ ಬಣ ರಾಜಕೀಯ ತೆರೆ ಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.

ಕಳೆದ ಅವಧಿಯಲ್ಲಿ ರಾಜ್ಯ ನಾಯಕರು ಸಚಿವ ಸ್ಥಾನ ನೀಡುವುದಾಗಿ ಕರೆದು ಕೊನೆ ಕ್ಷಣದಲ್ಲಿ ನೀಡದಿದ್ದುದರಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜಿಮಾಮೆ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿಯೇ ಸ್ವರ್ಧಿಸಿ ಭಾರಿ ಅಂತರದಿಂದ ಜಯಗಳಿಸಿದ್ದರು. ಈಗ ಮತ್ತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸೂಚನೆ ನೀಡಿದ್ದಾರೆ.

ಕಳೆದ ಭಾರಿ ಚುನಾವಣೆಗೆ ಹನ್ನೊಂದು ತಿಂಗಳು ಇರುವಾಗಲೇ ರಾಜಿನಾಮೆ ನೀಡಿದಂತೆ ಈ ಭಾರಿ ಮೂರು ತಿಂಗಳಿರುವಾಗಲೇ ರಾಜಿನಾಮೆ ನೀಡಿರುವುದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಎರಡೂ ಅವಧಿಯಲ್ಲಿ ಪೂರ್ಣಾವಧಿ ಪ್ರತಿನಿಧಿಸುವ ಶಾಸಕರಿಲ್ಲದಂತಾಗಿದೆ.

 

Exit mobile version