Kundapra.com ಕುಂದಾಪ್ರ ಡಾಟ್ ಕಾಂ

ಮರಳಿ ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲಾಡಿ ಅವರಿಗೆ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಸ್ವಾಗಿತಿಸಿಕೊಂಡರು. ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮುಖಂಡರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮೊದಲಾದವರು ಈ ಸಂದರ್ಭ ಇದ್ದರು.

ಕುಂದಾಪುರದಿಂದ ತೆರಳಿದ್ದ ಹಲವಾರು ಹಾಲಾಡಿ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಲಾಡಿ ಅವರು ಬಿಜೆಪಿ ಪಕ್ಷದ ಟಾಲ್ ನಂಬರ್‌ಗೆ ಮಿಸ್ ಕಾಲ್ ನೀಡಿ ಸದಸ್ಯತ್ವ ಪಡೆದುಕೊಂಡದ್ದು ವಿಶೇಷವಾಗಿತ್ತು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡದೇ ಅವಮಾನಿಸಿದ್ದಾರೆಂಬ ಬೇಸರಕ್ಕೆ ಹಾಲಾಡಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ವರ್ಧಿಸಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಮರಳಿ ಬೆಂಬಲಿಗರ ಒತ್ತಡಕ್ಕೆ ಮಣಿದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

 s

Exit mobile version