Kundapra.com ಕುಂದಾಪ್ರ ಡಾಟ್ ಕಾಂ

ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ತುಳು ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಭಾಗವಾಗಿದೆ. ಯುವ ಜನತೆಗೆ ತುಳು ಸಂಸ್ಕೃತಿಯನ್ನು ಕಲಿಸುವುದು ದೊಡ್ಡ ಸವಾಲಾಗಿದೆ. ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿನ ರಾಜಕಾರಣಿಗಳ ಅನಾಧರವೇ ಇದಕ್ಕೆ ಕಾರಣವಾಗಿದೆ. ತುಳುವಿನ ಉಳಿವಿಗೆ ಇಚ್ಛಾಶಕ್ತಿ ಬರಲಿ ಎಂದು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು.

ಶ್ರೀ ವಿದ್ಯಾಸಂಸ್ಥೆ, ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಜಂಟಿ ಸಹಯೋಗದಲ್ಲಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಯಲು ರಂಗಮಂದಿರದ ಪಳಕಳ ಸೀತಾರಾಮ ಭಟ್ ವೇದಿಕೆಯಲ್ಲಿ ಬುಧವಾರ ರಾತ್ರಿ ನಡೆದ ೯ನೇ ವರ್ಷದ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬೈ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಸಂಪತ್ತನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು. ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವುಗಳ ಬೆಳವಣಿಗೆಗೆ ಸಹಕರಿಸಬೇಕು. ತುಳುನಾಡಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಿಗೆ ಸರ್ವರು ಬೆಂಗಾವಲಾಗಿರಬೇಕು ಎಂದರು.

ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುವಿನ ಪ್ರೀತಿಯಿರುವವರಿಂದ ಮಾತ್ರ ತುಳು ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ನಡೆಸಲು ಸಾಧ್ಯ. ಅದಕ್ಕೂ ಯೋಗಬೇಕು. ಅದನ್ನು ಆಸ್ವಾದಿಸುವ ಪ್ರೇಕ್ಷಕರಾಗಲು ಕೂಡ ಯೋಗ ಬೇಕು ಎಂದರು. ಕರ್ನಾಟಕದ ವಿವಿಧ ಟಿ.ವಿ.ಶೋಗಳಲ್ಲಿ ಮಿಂಚಿದ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತ ಪ್ರತಿಭಾನ್ವಿತ ೨೦ ಮಂದಿ ಬಾಲಪ್ರತಿಭೆಗಳಿಗೆ ಕರ್ನಾಟಕ ಪ್ರತಿಭಾ ರತ್ನ ಗೌರವ ನೀಡಿ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ನೇತ್ರ ತಜ್ಞರ ಅಸೋಸಿಯೇಶನ್ ಅಧ್ಯಕ್ಷ ಡಾ.ಸುಧೀರ್ ಹೆಗ್ಡೆ, ಪುರಸಭಾ ಸದಸ್ಯ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕರ್ನಾಟಕ ತುಳು ಅಕಾಡೆಮಿ ಸದಸ್ಯ ತಾರಾನಾಥ ಕಾಪಿಕಾಡ್, ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಡಾ.ಸಂತೊಷ್ ಕುಮಾರ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಮುಂಬಯಿ ಇದರ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಜನಪದ ವಿದ್ವಾಂಸರಾದ ಡಾ.ಲಕ್ಷ್ಮೀ ಜಿ.ಪ್ರಸಾದ್ ಭಾಗವಹಿಸಿದರು. ಧರ್ಮಪಾಲ್ ದೇವಾಡಿಗ ಹಾಗೂ ಅರುವ ಕೊರಗಪ್ಪ ಶೆಟ್ಟಿ, ಡಾ. ಸುನಿತಾ ಶೆಟ್ಟಿ ಮುಂಬೈ ಇವರಿಗೆ ವಿಶ್ವ ತುಳುವ ರತ್ನ ಗೌರವ ನೀಡಲಾಯಿತು.

ಸಮ್ಮೇಳನದ ಸಂಘಟಕ ಶೇಖರ್ ಅಜೆಕಾರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು. ವಿಜಯ ಕುಮಾರ್ ಜೈನ್ ಅಳದಂಗಡಿ ಕಾರ್ಯಕ್ರಮ ನಿರೂಪಿಸಿದರು.

 

Exit mobile version