Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪೂರ್ವ ಪ್ರಾರ್ಥಮಿಕ ಶಾಲೆ: ವಿವಿಧ ಸ್ವರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್‌ನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣಾ ಕಾರ‍್ಯಕ್ರಮ ನಡೆಯಿತು.

ಮುಖ್ಯ ಅತಿಥಿ ಸುನೀತ ಉದಯ ಕುಮಾರ ಪುಟಾಣಿಗಳಗೆ ಬಹುಮಾನ ವಿತರಿಸಿ ಮಾತನಾಡಿ ನಿಜಕ್ಕೂ ಇಂತಹ ಕಾರ‍್ಯಕ್ರಮ ಪ್ರಶಂಸನೀಯ ಈ ಎಳೆವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು, ಆ ಮೂಲಕ ತಮ್ಮ ಪ್ರತಿಭೆಯನ್ನು ಹೊರಸೂಸಿ ಬಹುಮಾನ ಪಡೆಯುತ್ತಿರುವುದರ ಹಿಂದೆ ಶಾಲಾ ಶಿಕ್ಷಕರ ಮತ್ತು ಹೆತ್ತವರ ಪರಿಶ್ರಮ ಕಾಣಬಹುದು. ಶಾಲೆ ಎಂದರೆ ಕೇವಲ ಪಠ್ಯವನ್ನು ಬೋಧಿಸುವುದಲ್ಲ. ಜೊತೆಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಪಠ್ಯೇತರ ಚಟುವಟಿಕೆಗಳನ್ನು ಪ್ರತಿ ಹಂತದಲ್ಲೂ ಆಯೋಜಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಗುರುಕುಲ ಶಾಲೆ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲಾ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಜೇತರಿಗೆ ಬಹುಮಾನ ನೀಡುವುದರ ಜೊತೆಗೆ ಭಾಗವಹಿಸಿದ ಪ್ರತಿ ಮಗುವನ್ನು ಗುರುತಿಸಿ ಬಹುಮಾನ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಮಾತನಾಡಿ ಶಿಕ್ಷಣ ಎಂದರೆ ವಿಕಾಸ ಎಂದರ್ಥ ಮಕ್ಕಳ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಶಾಲೆಯ ಮುಖಾಂತರ ನಡೆಯುತ್ತದೆ. ಅದಕ್ಕೆ ಬೇಕಾದ ಸೂಕ್ತ ವಾತಾವರಣವನ್ನು ಶಾಲೆ ಒದಗಿಸಬೇಕಾಗುತ್ತದೆ. ಅಂತಹ ಮಲಿನಮುಕ್ತ ಹಸಿರು ವಾತಾವರಣದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪರಿಕರಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ತೃಪ್ತಿ ನಮಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್.ನಾಯರ್, ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕಿಯರು ಮತ್ತು ಎಲ್ಲಾ ಪೋಷಕರು ಉಪಸ್ಥಿತರಿದ್ದರು.

 

Exit mobile version