Kundapra.com ಕುಂದಾಪ್ರ ಡಾಟ್ ಕಾಂ

ನೂತನ ಬೈಂದೂರು ತಾಲೂಕು ಉದ್ಘಾಟನೆಗೆ ಸಿದ್ಧತೆ. ಫೆ.14ರಿಂದ ಕಾರ್ಯಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಭಾಗದ ನಾಗರಿಕರ ಬಹುಕಾಲದ ಬೇಡಿಕೆ ನನಸಾಗುತ್ತಿದ್ದು ಫೆ.14ರಿಂದ ಬೈಂದೂರು ನೂತನ ತಾಲೂಕಾಗಿ ಕಾರ್ಯಾರಂಭಗೊಳ್ಳಲಿದೆ. ರಾಜ್ಯ ಸರಕಾರ ಬಜೆಟ್ನಲ್ಲಿ ಘೋಷಿಸಿದಂತೆ ನೂತನ ತಾಲೂಕು ರಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದು ನೂತನ ಬೈಂದೂರು ತಾಲೂಕು ರಚನೆಗೆ ಸಿದ್ಧತೆಗಳು ನಡೆದಿವೆ. ಫೆಬ್ರವರಿ 14ರಂದು ತಾಲೂಕು ಕೇಂದ್ರ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದ್ದು, ನಾಗರಿಕರಲ್ಲಿ ಸಂತಸ ಮೂಡಿಸಿದೆ.

ಬಹುಕಾಲದ ಬೇಡಿಕೆ ನನಸು:
ತಾಲೂಕು ರಚಿಸಬೇಕೆಂಬ ಆಗ್ರಹ ಎಪ್ಪತ್ತರ ದಶಕದಲ್ಲಿ ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ರಚನೆಗೊಂಡ ವಾಸುದೇವ ರಾವ್ ಆಯೋಗ ಹಾಗೂ ಟಿ.ಎಂ ಹುಂಡೇಕರ ಆಯೋಗ, ಗದ್ದಿಗೌಡರ್ ಸಮಿತಿ, ಎಂ.ಬಿ. ಪ್ರಕಾಶ್ ರಾವ್ ಸಮಿತಿ ಮುಂತಾದವುಗಳು ಬೈಂದೂರು ತಾಲೂಕು ರಚನೆಯ ಅಗತ್ಯತೆಯನ್ನು ಪುಷ್ಠಿಕರಿಸಿದ್ದವು. ಈ ಭಾಗದ ನಾಗರಿಕರು ನಿರಂತರವಾಗಿ ತಾಲೂಕು ರಚನೆಯ ಬಗ್ಗೆ ಮನವಿ ಸಲ್ಲಿಸುತ್ತಾ, ಹೋರಾಡುತ್ತಾ ಬಂದವರು. ಬೈಂದೂರು ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ. ಜಗನ್ನಾಥ ಶೆಟ್ಟಿ ಅವರು ತಾಲೂಕು ರಚನೆಯ ಹಂತ ಹಂತವನ್ನೂ ಮನಗಂಡವರು. ಬೇಡಿಕೆಗೆ ಪೂರಕವಾಗಿ ಹಿಂದಿನ ಬಿಜೆಪಿ ಸರಕಾರ ಬಜೆಟಿನಲ್ಲಿ ತಾಲೂಕು ಘೋಷಿಸಿತ್ತಾದರೂ ಸೂಕ್ತ ಅನುದಾನದ ಕೊರತೆಯಿಂದ ಹೊಸ ಸರಕಾರ ಆಡಳಿತಕ್ಕೆ ಬಂದಾಗ ನೆನೆಗುದಿಗೆ ಬಿದ್ದಿತ್ತು. ಮತ್ತೆ ಕಾಂಗ್ರೆಸ್ ಸರಕಾರ ಬಜೆಟಿನಲ್ಲಿ ನೂತನ ತಾಲೂಕು ರಚನೆಯ ಬಗ್ಗೆ ಘೋಷಿಸಿ, ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ರಾಜ್ಯಪತ್ರದಲ್ಲಿ ಪ್ರಕಟಿಸಿ ತಾಲೂಕಾಗಲು ಅಧಿಕೃತ ಮುದ್ರೆ ಒತ್ತಿತು.

ಬೈಂದೂರು ತಾಲೂಕು:
ನೂತನ ಬೈಂದೂರು ತಾಲೂಕು ಫೆ.14ರಿಂದಲೇ ಕಾರ್ಯಾರಂಭವಾಗಲಿದ್ದು ಬೈಂದೂರಿನ ನಾಗರಿಕರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಂತಾಗಿದೆ. ಈಗಾಗಲೇ ಬೈಂದೂರಿನಲ್ಲಿ ವಿಶೇಷ ತಹಶೀಲ್ದಾರರು, ನೊಂದಣಾಧಿಕಾರಿ ಸೇರಿದಂತೆ ಪ್ರಮುಖ ಇಲಾಖೆಗಳಿದ್ದು ಮುಂದೆ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಇಲಾಖೆಗಳು ತಾಲೂಕು ಕೇಂದ್ರದಲ್ಲಿಯೇ ಕಾರ್ಯರಂಭ ಮಾಡಲಿದೆ. ವಿವಿಧ ಕಛೇರಿ, ಸಿಬ್ಬಂಧಿಗಳ ನೇಮಕಾತಿ ಹಾಗೂ ನೂತನ ತಾಲೂಕಿನಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾಗಿ ಸರಕಾರ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಿದೆ. ತಾಲೂಕು ರಚನೆಯ ಸಂದರ್ಭದಲ್ಲಿಯೇ ಬೈಂದೂರಿಗೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಡಿಪೋ, ಅಗ್ನಶಾಮಕ ಠಾಣೆಗಳು ಮಂಜೂರಾಗಿದೆ.

ಗ್ರಾಮಗಳು:
ಬೈಂದೂರು ತಾಲೂಕು ಒಟ್ಟು 26 ಗ್ರಾಮಗಳನ್ನು ಒಳಗೊಂಡಿದೆ. ಶಿರೂರು, ಪಡುವರಿ, ಬೈಂದೂರು, ಯಡ್ತರೆ, ತಗ್ಗರ್ಸೆ, ಬಿಜೂರು, ಉಪ್ಪುಂದ, ನಂದನವನ, ಕೆರ್ಗಾಲು, ಕಿರಿಮಂಜೇಶ್ವರ, ಉಳ್ಳೂರು 11, ಕಂಬದಕೋಣೆ, ಹೆರಂಜಾಲು, ನಾವುಂದ, ಬಡಾಕೆರೆ, ಮರವಂತೆ, ಹಡವು, ನಾಡ, ಹೇರೂರು, ಕಾಲ್ತೋಡು, ಗೋಳಿಹೊಳೆ, ಯಳಜಿತ, ಕೊಲ್ಲೂರು, ಜಡ್ಕಲ್, ಮುದೂರು ಹಳ್ಳಿಹೊಳೆ.

ಬೈಂದೂರು ಭಾಗದ ನಾಗರಿಕರಿಗೆ ನೀಡಿದ ಮಾತಿನಲ್ಲಿ ಬೈಂದೂರು ತಾಲೂಕನ್ನು ರಚಿಸಲಾಗಿದೆ. ನಿರಂತರವಾಗಿ ಮುಖ್ಯಮಂತ್ರಿಗಳು, ಕಂದಾಯ ಸಚಿವರನ್ನು ಸಂಪರ್ಕಿಸಿ ಬೈಂದೂರು ತಾಲೂಕಿನ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತಾ ಬರಲಾಗಿತ್ತು. ಕೊನೆಗೂ ಉತ್ತಮ ಸ್ಪಂದನೆ ದೊರೆತಿದೆ. ಬೈಂದೂರು ತಾಲೂಕಿಗೆ ಅಗತ್ಯವಾದ ಎಲ್ಲಾ ಬಗೆಯ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು – ಕೆ. ಗೋಪಾಲ ಪೂಜಾರಿ, ಶಾಸಕರು ಬೈಂದೂರು ಕ್ಷೇತ್ರ

 

Exit mobile version