ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಮೆಚ್ಚಿದ ಶಿಕ್ಷಕರಾಗಿದ್ದ ಭೋಜು ಹಾಂಡರು ನಮ್ಮನ್ನಗಲಿ ವರುಷ ಸಂದರೂ ಅವರ ನೆನಪು ಇನ್ನೂ ಹಸಿರಾಗಿದೆ. ಇಂದು ಭೋಜು ಹಾಂಡರ ನೆನಪಲ್ಲೇ ನಾವು ಬಣ್ಣದ ನೆನಪು ಮಾಡಿಕೊಳ್ಳಬೇಕಾಗಿದೆ. ಭಾವಕ್ಕೆ ಬಣ್ಣದ ಲೇಪನ ಮಾಡಿದವರು ಭೋಜ ಹಾಂಡರು. ಈ ಬಣ್ಣದ ಬೆಸುಗೆ ನಿರಂತರವಾಗಿ ಮುನ್ನಡೆಯಲಿ ಎಂದು ಸಮುದಾಯ ಕುಂದಾಪುರ ಕಾರ್ಯದರ್ಶಿ, ಶಿಕ್ಷಕ ಸದಾನಂದ ಬೈಂದೂರು ನುಡಿದರು.
ಜ್ಞಾನ ಯುವಜನ ಹೆಮ್ಮಾಡಿ ಇದರ ಆಶ್ರಯದಲ್ಲಿ ಪ್ರಾಥಮಿಕ ಶಾಲೆ ಹೆಮ್ಮಾಡಿ ಇದರ ಸಭಾಂಗಣದಲ್ಲಿ ನಡೆದ ಬಣ್ಣದ ಲೋಕದ ಗಾರುಡಿಗ ದಿವಂಗತ ಭೋಜು ಹಾಂಡರ ನೆನಪಿನ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ’ಬಣ್ಣದ ಬೆಸುಗೆ-2018’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭೋಜ ಹಾಂಡರು ವೃತ್ತಿಯನ್ನೇ ತನ್ನ ಪ್ರವೃತ್ತಿಯನ್ನಾಗಿಸಿಕೊಂಡವರು. ಅವರ ವೃತ್ತಿಯೇ ಅವರಿಗೆ ಇಂದು ಇಷ್ಟೊಂದು ಜನ ಗೌರವ ಕೊಡಲು ಸಾಧ್ಯವಾಯಿತು. ಒಂದೊಳ್ಳೆ ಶಿಕ್ಷಕನಿಗಿರಬೇಕಾದ ಎಲ್ಲಾ ಗುಣಗಳು ಭೋಜ ಹಾಂಡರಲ್ಲಿದ್ದವು. ಬಣ್ಣದ ಹುಡುಕಾಟದಲ್ಲಿ ಏನೋ ಒಂದು ಅವ್ಯಕ್ತವಾದ ಸಂತೋಷ ಅಡಗಿದೆ ಎನ್ನುವುದನ್ನು ತಮ್ಮ ಶಿಷ್ಯಂದಿರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಭೋಜು ಹಾಂಡರ ಗರಡಿಯಲ್ಲಿ ಫಳಗಿ ಬಂದ ವಿದ್ಯಾರ್ಥಿಗಳು ಇಂದು ಭೋಜು ಹಾಂಡರಿಗಿಂತ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಅವರು ನಮ್ಮ ಜೊತೆ ಇರಬೇಕಿತ್ತು ಎಂದು ಶಿಕ್ಷಕ ಸದಾನಂದ ಬೈಂದೂರು ಹೇಳಿದರು.
ಸದಾ ಪಾದರಸದಂತಹ ವ್ಯಕ್ತಿತ್ವದ ಭೋಜು ಹಾಂಡರು ಬಹಳ ಶಿಸ್ತಿನ ಜೀವ ನಡೆಸಿದ್ದು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ಅವರು ತಮ್ಮ ವೃತ್ತಿ ಜೀವನದಲ್ಲಿ ಶಿಕ್ಷಕರನ್ನೂ ಬೆಳೆಸಿದ್ದಾರೆ. ಭೋಜು ಹಾಂಡರು ಕಲೆಯನ್ನು ಪ್ರೀತಿಸುತ್ತಿದ್ದು, ಆ ಕಲೆಯನ್ನು ಎಲ್ಲರಿಗೂ ತಲುಪಿಸಬೇಕೆಂಬ ಮಹಹಾದಾಸೆ ಇಟ್ಟುಕೊಂಡಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಶಿಕ್ಷಕ ಸುರೇಶ ಹೆಮ್ಮಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತ್ ಸದಸ್ಯ ಆನಂದ ಪಿಎಚ್, ಯೋಗ ಶಿಕ್ಷಕ ಪ್ರವೀಣ್ ಕುಮಾರ್ ಹೆಗ್ಡೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ ಹಟ್ಟಿಯಂಗಡಿ, ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಭೋಜು ಹಾಂಡರ ಪುತ್ರರಾದ ರಾಕೇಶ್ ಹಾಂಡ, ರಾಜೇಶ್ ಹಾಂಡ ಹಾಗೂ ಪುತ್ರಿ ಕುಮಾರಿ ರೂಪಶ್ರೀ ಹಾಂಡ ಇದ್ದರು.
ಜ್ಞಾನ ಯುವಜನ ಸಮಿತಿಯ ಹರೀಶ್ ಹೆಮ್ಮಾಡಿ ಸ್ವಾಗತಿಸಿದರು. ವಿಘ್ನೇಶ್ ಹೆಮ್ಮಾಡಿ ಧನ್ಯವಾದವಿತ್ತರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಪ್ರಸ್ತಾಪಿಸಿ, ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಭೋಜು ಹಾಂಡರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಶ್ರದ್ದಾಂಜಲಿ ಅರ್ಪಿಸಿ, ಪುಷ್ಪ ನಮಸ ಸಲ್ಲಿಸಲಾಯಿತು. ಪ್ರಾಥಮಿಕ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಭೋಜು ಹಾಂಡರ ಪುತ್ರ ರಾಕೇಶ್ ಹಾಂಡ ಚಿತ್ರ ಬಿಡಿಸುವುದುರ ಮೂಲಕ ಚಾಲನೆ ನೀಡಿದರು. ಸುಮಾರು ೬೦ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.