Kundapra.com ಕುಂದಾಪ್ರ ಡಾಟ್ ಕಾಂ

ಧಾರ್ಮಿಕ ನಂಬಿಕೆಗಳಿಂದ ಮಾನಸಿಕ ಚೈತನ್ಯ ತುಂಬಿ, ಶಾಂತಿ ನೆಲೆಸುತ್ತದೆ: ಚಂದ್ರಶೇಖರ ನಾವಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಕ್ತಿಯು ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲಿಯೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯಗಳಿಗೆ ಒಳಗಾಗದೇ, ಭಕ್ತಿ, ಶೃದ್ಧೆಯಿಂದ ನಿರಂತರವಾಗಿ ಸಾಧನೆ ಮಾಡಿದಾಗ ಭಗವಂತನನ್ನು ಕಾಣಬಹುದಾಗಿದೆ ಎಂದು ಭಾರತೀಯ ಸೇನಾ ಶಿಕ್ಷಣ ಕೋರ್‌ನ ನಿವೃತ್ತ ಉಪನ್ಯಾಸಕ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.

ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಪ್ರತಿಷ್ಠಾ ವರ್ಧಂತಿ ಹಾಗೂ ಶತಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲಾ ನ್ಯೂನ್ಯತೆಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಜೀವನದ ಒಂದು ಭಾಗ. ಸಮಜದಲ್ಲಿ ಇದನ್ನು ಬೇರೆ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಧರ್ಮದ ಮೇಲಿನ ಶೃದ್ಧೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಎಂದರು.

ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತದೆ. ಹಾಗೆಯೇ ಧಾರ್ಮಿಕ ನಂಬಿಕೆಗಳು ಮನುಷ್ಯನಿಗೆ ಚೈತನ್ಯ ನೀಡುವುದಲ್ಲದೇ ಮಾನಸಿಕ ಶಾಂತಿ ಮತ್ತು ಸನ್ಮಾರ್ಗ ಜೀವನಕ್ಕೆ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತದೆ. ದೇವರ ಮೇಲೆ ನಿರಂತರವಾಗಿ ಭಕ್ತಿಯನ್ನಿಟ್ಟು ನಿತ್ಯ ನಿರಂತರ ಭಜನೆ ಆರಾಧನೆ ಮಾಡುವುದರಿಂದ ನಮ್ಮ ಜೀವನ ಸಾಕ್ಷಾತ್ಕಾರಗೊಳ್ಳಲು ಸಹಕಾರಿಯಾಗುತ್ತದೆ ನಮ್ಮ ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದಿರುವ ಧರ್ಮ ಸೂಕ್ಷ್ಮಗಳನ್ನು ಮತ್ತು ಸಂಸ್ಕಾರವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯವಿದೆ ಎಂದರು.

ಜಿಪಂ ಸದಸ್ಯ ಸುರೇಶ ಬಟ್ವಾಡಿ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಶ್ರೀ ದುರ್ಗಾ ಯಕ್ಷೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ ಅವಭೃತ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ವಾಸುದೇವ ರಾವ್, ನಾರಾಯಣ ಆಚಾರ್ಯ ಮಾವಡ, ಎಚ್. ನಾರಾಯಣ ದೇವಾಡಿಗ ಹೊಸಾಡು ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ವಂದಿಸಿದರು. ಸುಧಾಕರ ಪಿ. ನಿರೂಪಿಸಿದರು.

 

Exit mobile version