Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಶಾಸಕರ ಪಿತೂರಿ: ಬಿಎಂಎಸ್ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಗ್ದರ ಮೇಲೆ ಗಧಾಪ್ರಹಾರ ಒಳ್ಳೆಯ ಬೆಳವಣಿಗೆಯಲ್ಲ. ಬಿಜೂರು ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ವಿರುದ್ದ ಅವಿಶ್ವಾಸ ಮಂಡನೆ ಶಾಸಕ ಕೆ. ಗೋಪಾಲ ಪೂಜಾರಿಯವರ ಷಡ್ಯಂತ್ರದ ಒಂದು ಭಾಗ. ಅವರ ಈ ನಡೆಯಿಂದ ಹಿಂದುಳಿದ ದೇವಾಡಿಗ ಸಮುದಾಯಕ್ಕೆ ಮಾಡಿದ ಅಪಚಾರವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಆರೋಪಿಸಿದರು.

ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕ್ಕೆ ಎಂದಿಗೂ ಜಯವಿದೆ ಎಂಬುವುದು ಇಂದಿನ ಈ ಪ್ರಕರಣದಿಂದ ಸಾಬೀತಾಗಿದೆ. ಯಾವುದೇ ತೊಡಕಿಲ್ಲದೇ ಸಸೂತ್ರವಾಗಿ ಆಡಳಿತ ನಡೆಸುತ್ತಿರುವವ ಅಧ್ಯಕ್ಷೆಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಇಲ್ಲಿನ ಶಾಸಕರು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಸಂಚು ರೂಪಿಸಿರುವುದು ವಿಷಾದನೀಯ. ಬೈಂದೂರು ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ೫ ನದಿಗಳು ಹರಿಯುತ್ತಿದ್ದರೂ, ಇನ್ನೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ಈ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಕಳೆದ ಮೂರು ತಿಂಗಳಿಂದ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಜನರಿಗೆ ದಾರಿತಪ್ಪಿಸುವ ಕೆಲಸವಾಗುತ್ತಿದೆ. ಅಭಿವೃದ್ಧಿ ಕೇವಕ ಪ್ಲೆಕ್ಸ್, ಬ್ಯಾನರ್‌ಗಳಿಗಷ್ಟೇ ಸೀಮಿತವಾಗಿದೆ.

ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುತ್ವ, ರಾಷ್ಟ್ರೀಯ ವಿಚಾರಗಳನ್ನು ಕಟ್ಟಿಹಾಕುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಪೋಲಿಸ್ ಠಾಣೆಗಳು ಕಾಂಗ್ರೆಸ್ ಆಫೀಸ್‌ಗಳಾಗಿವೆ. ಅಮಾಯಕರನ್ನು ಒತ್ತಾಯ ಪೂರ್ವಕವಾಗಿ ಅಪರಾಧಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಗಂಗೊಳ್ಳಿ ಬೆಂಕಿ ಪ್ರಕರಣವನ್ನು ಉದಾಹರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ವಿಶ್ವಾಸವ್ಯಕ್ತಪಡಿಸಿದ ಅವರು ಮಾ.೨೪ ಕ್ಕೆ ಪಕ್ಷದ ಅಭ್ಯರ್ಥಿ ಅಧೀಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದ್ದು, ಈಗಾಗಲೇ ಬೂತ್ ಮಟ್ಟದಿಂದಲೇ ಪಕ್ಷ ಸಂಘಟನಾ ಕಾರ್ಯ ನಡೆಯುತ್ತಿದೆ ಎಂದರು.

ಜಿಪಂ ಸದಸ್ಯ ಸುರೇಶ ಬಟವಾಡಿ ಮಾತನಾಡಿ, ಬೈಂದೂರಿನಲ್ಲಿ ಮೇಲ್ಸೆತುವೆ ನಿರ್ಮಾಣಕ್ಕಾಗಿ ಸಂಸದರಿಗೆ ಮನವಿ ಮಾಡಿದ್ದು, ಅವರು ಅದಕ್ಕೆ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ, ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಕಳಪೆಯಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಎಪಿಎಂಸಿ ಸದಸ್ಯ ಮಂಜು ದೇವಾಡಿಗ, ಬಿಜೆಪಿ ಮುಖಂಡರಾದ ದೀಪಕ್ ಕುಮಾರ ಶೆಟ್ಟಿ, ನವೀನ್‌ಚಂದ್ರ ಉಪ್ಪುಂದ, ಬಾಲಚಂದ್ರ ಭಟ್, ಪ್ರಿಯದರ್ಶಿನಿ ದೇವಾಡಿಗ, ದಿವಾಕರ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ರವಿ, ಎ. ಆನಂದ ಖಾರ್ವಿ, ಗಣೇಶ ಯಡಿಯಾಳ್, ರಮೇಶ ಪೂಜಾರಿ, ರಾಜೇಂದ್ರ ಬಿಜೂರು, ಸುರೇಶ ಬಿಜೂರು, ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Exit mobile version