Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ ಮಿತ್ರ ಸಂಗಮದ ವಾರ್ಷಿಕೋತ್ಸವ: ರಫೀಕ್ ಬ್ಯಾರಿ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೃಷಿಯಲ್ಲಿ ಖುಷಿಯನ್ನು ಕಂಡವರಲ್ಲಿ ನಾನೂ ಒಬ್ಬ. ಕೃಷಿ ಮಾಡಬೇಕಾದರೆ ಎಕರೆಗಟ್ಟಲೆ ಭೂಮಿಯ ಅಗತ್ಯವಿಲ್ಲ.ಹತ್ತು ಸೆಂಟ್ಸ್ ಜಾಗದಲ್ಲಿಯೂ ಸಹ ಒಳ್ಳೆಯ ಕೃಷಿಯನ್ನು ಮಾಡಿ ಬದುಕು ನಡೆಸಬಹುದು. ಮಿತ್ರ ಸಂಗಮ ಸಂಸ್ಥೆ ಕೃಷಿಕನಾದ ನನ್ನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮೂಡುಗೋಪಾಡಿಯ ಪ್ರಗತಿಪರ ಕೃಷಿಕ ರಫೀಕ್ ಬ್ಯಾರಿ ಹೇಳಿದರು.

ಅವರು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ 21ನೇಯ ವಾರ್ಷಿಕೋತ್ಸವದಲ್ಲಿ ಸಂಸ್ಥೆ ಕೊಡಮಾಡುವ ನಮ್ಮೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಗನ್ನಡದ ವಾಟ್ಸಪ್ ರಾಯಭಾರಿ ಮನು ಹಂದಾಡಿ ಮಾತನಾಡಿ,ಮಿತ್ರ ಸಂಗಮ ಅನ್ನ ನೀಡುವ ರೈತನನ್ನು ಸನ್ಮಾನಿಸಿ ಇತರ ಸಂಸ್ಥೆಗೆ ಮಾದರಿ ಎನಿಸಿದೆ. ಒಂದು ಸಂಸ್ಥೆ 21 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕಾದರೆ ಅದರ ಹಿಂದೆ ಒಂದಷ್ಟು ಸದಸ್ಯರ ಉತ್ಸಾಹ ಪೂರ್ಣವಾದ ದುಡಿಮೆ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಕೆ.ಆರ್.ನಾಯ್ಕ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕೃರ,ಬಡ ಕುಟುಂಬಕ್ಕೆ ಸೋಲಾರ್ ದೀಪ ಹಸ್ತಾಂತರ ನಡೆಯಿತು.

ಸಂಸ್ಥೆಯ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು.ಪ್ರದೀಪ ದೇವಾಡಿಗ,ಗಿರೀಶ್ ಕೆ.ಎಸ್. ಬಹುಮಾನಿತರ ಪಟ್ಟಿ,ಚಂದ್ರ ಬಿ.ಎನ್.ಸಂದೇಶ, ಕಾರ್ಯದರ್ಶಿ ಶ್ರೀಕಾಂತ್ ಭಟ್ ವರದಿ,ಅನೂಪ್‌ಕುಮಾರ್ ಬಿ.ಆರ್. ಸನ್ಮಾನ ಪತ್ರ ವಾಚಿಸಿದರು.ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು,ತೆಕ್ಕಟ್ಟೆ ಓಂಕಾರ ಕಲಾವಿದರಿಂದ ಡಿಸೆಂಬರ್-8 ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

Exit mobile version