Kundapra.com ಕುಂದಾಪ್ರ ಡಾಟ್ ಕಾಂ

ವಿದ್ವಾನ್ ವಾಗೀಶ್ ಭಟ್‌ರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ರ ಹೆಸರಿನಲ್ಲಿ ನೀಡುವ 2017-18 ರ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ ನಾದೋಪಾಸಕ ವಿದ್ವಾನ್ ವಾಗೀಶ್ ಭಟ್ ರವರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ.

ವೇದಮೂರ್ತಿ ಗಣಪತಿ ಶರ್ಮಾ ದಂಪತಿಗಳ ಸುಪುತ್ರರಾದ ವಾಗೀಶ್ ಭಟ್‌ರು ಬಾಲ್ಯದಿಂದಲೇ ಸಂಗೀತವನ್ನು ಅಭ್ಯಸಿಸಿ ಮೇರು ಮಟ್ಟಕ್ಕೇರಿ ಸಂಗೀತವೇ ತನ್ನುಸಿರು ಎಂಬ ಧ್ಯೇಯವನ್ನಿರಿಸಿ ಮುನ್ನೆಡೆಯುತ್ತಿದ್ದಾರೆ. ಶ್ರೀಯುತರ ಅಜ್ಜ ವೇದಮೂರ್ತಿ ಜ್ಯೋತಿಷಿ ಅಪ್ಪಾ ಭಟ್ ರವರೇ ಇವರ ಮೊದಲ ಗುರು. ನಂತರ ಭಟ್ಟರು ಕುಂದಾಪುರದ ಸುಪ್ರಸಿದ್ಧ ಸದಾರಂಗ್ ಸಂಗೀತ ವಿದ್ಯಾಲಯದ ಪ್ರೊ. ಗೋವರ್ಧನ ಶ್ಯಾನುಭಾಗರಿಂದ ಸಂಗೀತದ ದೀಕ್ಷೆಯನ್ನು ಪಡೆದರು. ಮುಂದೆ ಬೆಂಗಳೂರಿನ ಸರಸ್ವತಿ ಸಂಗೀತ ವಿದ್ಯಾಲಯದ ಸಂಪರ್ಕ ಪಡೆದು ಗುರು ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸಿದರು. ಸುಮಾರು ಮೂರು ದಶಕಗಳ ಸುಧೀರ್ಘ ಸಾಧನೆಯನ್ನು ಸುಪ್ರಸಿದ್ಧ ಸಂಗೀತಕಾರರಾಗಿದ್ದ ದಿ. ವಿದುಷಿ ಲಕ್ಷ್ಮೀ ಗೋವಿಂದ ಭಾವೆಯವರಲ್ಲಿ ಹಾಗೂ ನಂತರ ಉಭಯ ಗಾನ ವಿದುಷಿ ಡಾ. ಶ್ಯಾಮಲಾ ಜಿ.ಭಾವೆಯವರಲ್ಲಿ ಮಾಡುವ ಅವಕಾಶವನ್ನು ಪಡೆದ ಅದೃಷ್ಟಶಾಲಿಗಳು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ದೇಶದ ವಿವಿಧ ಭಾಷೆಗಳಲ್ಲಿ ಮುಖ್ಯವಾಗಿ ಸಂಸ್ಕೃತ, ಹಿಂದಿ, ಕನ್ನಡ, ಮರಾಠಿ ಹಾಗೂ ಕೊಂಕಣಿ ಭಾಷೆಗಳಲ್ಲಿ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಸಂಗೀತದೊಂದಿಗೆ ಸಂಗೀತಕ್ಕೆ ಸಾಥ್ ನೀಡುವ ಹಾರ‍್ಮೋನಿಯಂ, ಸಿತಾರ್ ವಾದನ, ತಬಲಾ, ಮದ್ದಲೆ ಹಾಗೂ ಪಾಶ್ಯಿಮಾತ್ಯ ಪಿಯಾನೋವನ್ನೂ ನುಡಿಸುವ ವಿಶೇಷ ಕೌಶಲ್ಯವನ್ನೂ ಶ್ರೀಯುತರು ಪಡೆದಿದ್ದಾರೆ. ಬಿ.ಕಾಂ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಎರಡು ದಶಕಗಳ ಕಾಲ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ವಕೀಲಿ ವೃತ್ತಿಯಲ್ಲಿ ಸರ್ಟಿಫಿಕೇಟ್ ಕೋರ್ಸು ಹಾಗೂ ವೈದಿಕ ವೃತ್ತಿಯನ್ನೂ ಚೆನ್ನಾಗಿ ಅಭ್ಯಸಿಸಿ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಾಗೀಶ ಭಟ್ಟರು ಕಾವ್ಯ ರಚನೆಕಾರರು, ಉತ್ತಮ ವಾಗ್ಮಿ, ಬರಹಗಾರರೂ ಆಗಿದ್ದಾರೆ.

ಅವರು ಸಂಗೀತ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸೇವೆಯಿಂದ ದೇಶ-ವಿದೇಶಗಳಲ್ಲಿ ನಿರಂತರ ತನ್ನ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಹೃನ್ಮನಗಳನ್ನು ತಣಿಸಿರುವ ನೆಲೆಯಲ್ಲಿ ಪ್ರಶಸ್ತಿ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದೆ. ಹಾಗೇ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಮೂರನೇ ವಾರ್ಷಿಕೋತ್ಸವ ಎಪ್ರಿಲ್ ೨೯ ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಭಾಗವಹಿಸುವ ಗಣ್ಯರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version