Kundapra.com ಕುಂದಾಪ್ರ ಡಾಟ್ ಕಾಂ

ಫ್ರೆಂಡ್ಸ್ ಸ್ವಾವಲಂಬನ , ಡೊಂಬಿವಲಿ: ಹಳೆಯ ತಾಮ್ರ , ಹಿತ್ತಾಳೆ ಪಾತ್ರೆಗಳ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಡೊಂಬಿವಲಿ: ಕೇವಲ 30, 40 ವರ್ಷಗಳ ಹಿಂದೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಪಾತ್ರೆಗಳಾದ ಕೊಡಪಾನ , ತಂಬಿಗೆ, ಹರಿವಾಣ ತಟ್ಟೆ , ಚಮಚ , ದೀಪ, ಮೂರ್ತಿ ಇತ್ಯಾದಿಗಳು ಈಗ ಕಣ್ಮರೆ ಆಗುತ್ತಿದೆ. ಆ ಜಾಗದಲ್ಲಿ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆ , ಮಿಕ್ಸರ್, ಹೀಟರ್, ಕುಕ್ಕರ್ ಮೊದಲಾದ ಉಪಕರಣಗಳು ಹೆಚ್ಚಾಗುತ್ತಿದೆ.

ಹಳೆಯ ಪರಿಕರಗಳಿಗೆ ಜಾಗವಿಲ್ಲವೆಂದು ಅವುಗಳನ್ನು ಅತ್ಯಲ್ಪ ಕಡಿಮೆ ಕ್ರಯಕ್ಕೆ ಮಾರಾಟ ಮಾಡುತ್ತಿದ್ದೇವೆ. ಆದರೆ ಅವುಗಳು ನಮ್ಮ ಜೀವನ ರೀತಿ , ಸಂಸ್ಕೃತಿ , ಜಾನಪದವನ್ನು ಎತ್ತಿ ತೋರಿಸುತ್ತದೆ ಎಂಬುದನ್ನು ಮರೆತಿದ್ದೇವೆ. ಆದರೂ ಕಾಲ ಮಿಂಚಿಲ್ಲ. ಇನ್ನಾದರೂ ಇಂತಹ ವಸ್ತುಗಳನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರಾದ ವೆಂಕಟೇಶ ಪೈ ಡೊಂಬಿವಲಿಯ ಗೆಳೆಯರ ಸ್ವಾವಲಂಬನಾ ಕೇಂದ್ರದ ಕಚೇರಿಯಲ್ಲಿ ಇಂತಹ ವಸ್ತುಗಳನ್ನು ಸಂಗ್ರಹ ಮಾಡಲು ಪ್ರಾರಂಭಿಸಿದ್ದಾರೆ. ಚಿಕ್ಕಂದಿನಲ್ಲಿಯೇ ಹಳೆಯ ನಾಣ್ಯ, ಸ್ಟಾಂಪ್, ವಿವಿಧ ಪ್ರಕಾರದ ಡಬ್ಬಿ, ಮಾಪನ ಮಾಡುವ ಸೇರು ಹಾಗೂ ಅಚ್ಚೇರುಗಳು ಇವರ ಸಂಗ್ರಹದಲ್ಲಿವೆ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಇಂತಹ ವಸ್ತುಗಳು ಹಾಗೂ ಪರಿಕರಗಳನ್ನು ಸಂಗ್ರಹ ಮಾಡಿ ಅವುಗಳನ್ನು ಸಂರಕ್ಷಿಸಬೇಕು. ಸ್ಥಳದ ಅವಕಾಶವಿಲ್ಲದಿದ್ದಲ್ಲಿ ಪೈಯವರು ಹಾಗೂ ಅವರ ಮಿತ್ರರು ಅವುಗಳನ್ನು ಖರೀದಿಸಿ ಆಸಕ್ತರಿಗೆ, ದೇವಾಲಯಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಇಂತಹ ವಸ್ತುಗಳ ಸಂಗ್ರಹಾಲಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿಕೊಡುವ ಉದ್ದೇಶವನ್ನು ಹೊಂದಿದ್ದಾರೆ.

ಬೆಂಗಳೂರು, ಕುಂದಾಪುರ ಮೊದಲಾದ ಕಡೆಗಳಲ್ಲಿ ಇವರು ಸಂಗ್ರಹ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಈಗಾಗಲೇ ಹಲವಾರು ಇಂತಹ ವಸ್ತುಗಳ ಸಂಗ್ರಹ ಮಾಡಲಾಗಿದ್ದು ಅವುಗಳ ಪ್ರದರ್ಶನವನ್ನು ಡೊಂಬಿವಲಿ ಸ್ವಾವಲಂಬನ ಕೇಂದ್ರದ ಕಚೇರಿಯಲ್ಲಿ ಮಾರ್ಚ್ 11 ರಿಂದ 22ರ ತನಕ ಬೆಳಿಗ್ಗೆ 10 ರಿಂದ 1 ಹಾಗೂ ಸಂಜೆ 5 ರಿಂದ 9ರ ತನಕ ಆಯೋಜಿಸಲಾಗಿದೆ. ಆಸಕ್ತರು ಫ್ರೆಂಡ್ಸ್ ಸ್ವಾವಲಂಬನಾ, ಫ್ರೆಂಡ್ಸ್ ಬುಕ್ ಸ್ಟೋರ್ಸ್ ನ್ಯೂ ಶಿವಪ್ರಸಾದ ಸೊಸೈಟಿ, ಡಾ|. ಆರ್.ಪಿ.ಮಾರ್ಗ , ತಿಲಕ್ ನಗರ, ಅಮೃತ್ ಹಾಸ್ಪಿಟಲಿನ ಸಮೀಪ, ಡೊಂಬಿವಲಿ(ಪೂರ್ವ)421201 ಅಥವಾ ಮೊಬೈಲ್ – 9869921397 ಇವರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

Exit mobile version