Kundapra.com ಕುಂದಾಪ್ರ ಡಾಟ್ ಕಾಂ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಅಪಾಯದಿಂದ ಪಾರು: ಡಾ. ಪ್ರಶಾಂತ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಧುಮೇಹದಂತಹ ರೋಗ ಉಲ್ಬಣದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಸ್‌ಸಿಡಿ ಚಿಕಿತ್ಸಾಲಯವು ಕಾರ್ಯೋನ್ಮಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗಬಹುದಾದ ಅಪಾಯದಿಂದ ಪಾರಾಗಬಹುದಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು.

ಶನಿವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಎಸ್.ಸಿ.ಡಿ ಚಿಕಿತ್ಸಾಲಯ ಬೈಂದೂರು, ವಿಶ್ವ ಮಧುಮೇಹ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಮಧುಮೇಹ ರಕ್ತ ಪರೀಕ್ಷೆ, ರಕ್ತದೋತ್ತಡ ಮತ್ತು ಮಧುಮೇಹಿಗಳಿಗೆ ಪಾದಗಳ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿದರು.

ಸಾಂಕ್ರಾಮಿಕವಲ್ಲದ ಕಾಯಿಲೆಯನ್ನು ಶೀಘ್ರ ಪತ್ತೆಮಾಡಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಮುಖರನ್ನಾಗಿಸುವ ಉದ್ದೇಶದಿಂದ ಬೈಂದೂರು ಭಾಗದಲ್ಲಿ ಎರಡನೇ ಭಾರಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಬೈಂದೂರು ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಬೈಂದೂರಿನ ನಾಗರಿಕರಿಗೆ ಸೂಕ್ತ ಸಮಯದಲ್ಲಿ ಸರಕಾರದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲು ರೋಟರಿ ಸಂಸ್ಥೆಯೂ ಸಹಕಾರ ನೀಡುತ್ತಿದ್ದು, ಆರೋಗ್ಯ ಶಿಬಿರದಲ್ಲಿ ಭಾಗವಹಿಸುವುದರಿಂದ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ರೋಟರಿ ಕಾರ್ಯದರ್ಶಿ ಡಾ. ಪ್ರವೀಣ್ ಶೆಟ್ಟಿ, ಮುಂದಿನ ಸಾಲಿನ ಅಧ್ಯಕ್ಷ ಐ ನಾರಾಯಣ್, ಎಸ್.ಸಿ.ಡಿ ಚಿಕಿತ್ಸಾಲಯದ ವೈಧ್ಯಾಧಿಕಾರಿ ಡಾ. ಅದಿಥಿ ಶೆಟ್ಟಿ, ಎನ್‌ಸಿಡಿಯ ಫಿಸಿಯೋಥೆರಪಿಸ್ಟ್ ಶುಭಾ ಹಾಗೂ ಇಶಾ ವೇದಿಕೆಯಲ್ಲಿದ್ದರು. ಎನ್‌ಸಿಡಿ ವಿಭಾಗದ ಕೌನ್ಸಿಲರ್ ನಾಗರಾಜ್ ಆರ್ ಕಾರ್ಯಕ್ರಮ ನಿರೂಪಿಸಿದರು.

Exit mobile version