ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ದಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಇಂದಿರಾಜಿಯವರ ೨೦ ಅಂಶದ ಕಾರ್ಯಕ್ರಮದ ಮೂಲಕ ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್, ಕೃಷಿ ಮುಂತಾದ ಕ್ಷೇತ್ರಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ವಿಶ್ವದ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶವು ಮುಂಚೂಣಿಯ ಸ್ಥಾನಕ್ಕೇರಲು ಸಾಧ್ಯವಾಯಿತು. ಕಾಂಗ್ರೆಸ್ ಎಂದರೆ ಅದು ಕೇವಲ ಪಕ್ಷವಲ್ಲ. ಅದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.
ಅವರು ಶನಿವಾರ ಸಂಜೆ ಬಳ್ಕೂರಿನಲ್ಲಿ ನಡೆದ ಬಸ್ರೂರು ತಾ.ಪಂ.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರುಗಳ ನಿರ್ದೇಶನದ ಮೇರೆಗೆ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಆ ಮೂಲಕ ಈ ಕ್ಷೇತ್ರದ ರೈತರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಅರಿತಿದ್ದೇನೆ. ದಯವಿಟ್ಟು ಈ ಬಾರಿ ನನ್ನನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಮಾಣಿಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೆಡಿಪಿ ಸದಸ್ಯ ದೇವಾನಂದ ಶೆಟ್ಟಿ, ಕೆಪಿಸಿಸಿ ಸದಸ್ಯ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್, ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಿ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ವಕ್ವಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಮುಖಂಡರಾದ ಕೃಷ್ಣದೇವ ಕಾರಂತ, ಕಿರಣ್ ಹೆಗ್ಡೆ, ವಿಜಯ ಪುತ್ರನ್, ವಿಜಯಧರ ಪೂಜಾರಿ, ಕೃಷ್ಣಪ್ಪ ಶೆಟ್ಟಿ, ಶಶಿಕಲಾ, ಮಹಾಲಿಂಗ, ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.