Kundapra.com ಕುಂದಾಪ್ರ ಡಾಟ್ ಕಾಂ

ಹೊಸೂರು: ಶ್ರೀ ದುರ್ಗಾಪರಮೇಶ್ವರಿ ನೂತನ ಶಿಲಾಮಯ ದೇವಸ್ಥಾನದ ಪ್ರತಿಷ್ಟಾ ಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದೇವಾಲಯಗಳು ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಯ ಪ್ರತೀಕವಾಗಿದೆ. ಊರಿನಲ್ಲಿರುವ ದೇವಾಲಯಗಳು ಜನಸಮುದಾಯ ಅಭಿವೃದ್ಧಿಗೆ ಕಾರಣವಾಗುವುದಲ್ಲದೆ ಸಮಾಜ ಶಕ್ತಿಯುತವಾಗಿ ವಿಸ್ತಾರಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕೇಮಾರು ಸಾಂದೀಪನಿ ಮಠಾಧೀಶ ಈಶವಿಠಲದಾಸ ಸ್ವಾಮೀಜಿ ಹೇಳಿದರು.

ಬುಧವಾರ ಯಡ್ತರೆ ಗ್ರಾಪಂ ವ್ಯಾಪ್ತಿಯ ಹೊಸೂರು ಶ್ರೀ ದುರ್ಗಾಪರಮೇಶ್ವರಿ ನೂತನ ಶಿಲಾಮಯ ದೇವಸ್ಥಾನದ ಪ್ರತಿಷ್ಟಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮುಗ್ಧತೆ ಮತ್ತು ಪರಿಶುದ್ಧ ಹೃದಯ ಶ್ರೀಮಂತಿಕೆಯಿಂದ ಕೂಡಿದ ಬಡವರು ದೇವರಿಗೆ ಅತ್ಯಂತ ಪ್ರಿಯನಾಗುತ್ತಾನೆ ಅಲ್ಲದೇ ಅವರು ಕಷ್ಟದಿಂದ ನಿರ್ಮಿಸಿದ ದೇಗುಲ ದೇವರಿಗೆ ಇಷ್ಟವಾಗುತ್ತದೆ. ಕೇವಲ ಹಣ, ಅಂತಸ್ತು, ಶ್ರೀಮಂತಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗದು. ನಿಷ್ಕಲ್ಮಷ ಭಕ್ತಿಯಿಂದ ಮಾತ್ರ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಧರ್ಮಗಳು ಕೆವಲ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದ. ಬದಲಾಗಿ ಪ್ರತಿಯೊಬ್ಬರೂ ಕೂಡಾ ನಮ್ಮ ಸಂಸ್ಕೃತಿಯ ಜ್ಞಾನ ಹೊಂದಿರಬೇಕು. ದೇವಾಲಯಗಳ ಮೂಲಕ ಜೀವನದಲ್ಲಿ ಶಾಂತಿ ಸಮಾಧಾನ ನೆಮ್ಮದಿ, ತೃಪ್ತಿ ಪ್ರಾಪ್ತಿಯಾಗಿ ಜೀವನ ಮಂಗಲಮಯವಾಗುತ್ತದೆ ಎಂದರು.

ಬೈಂದೂರು ಶಾಸಕ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವಳ ನಿರ್ಮಾಕ್ಕೆ ನೆರವು ಹಾಗೂ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಜಿಪಂ ಮಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕಂಚಿಕಾನ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಕಿಣಿ, ವಲಯ ಗಾಣಿಗ ಸಂಘದ ಮಜಿ ಅಧ್ಯಕ್ಷ ಬಿ. ಎಂ. ನಾಗರಾಜ ಗಾಣಿಗ, ಧಾರ್ಮಿಕ ಮುಖಂಡ ಸೋಮಯ್ಯ ಎಸ್. ಗೊಂಡ, ದೇವಳದ ಗೌರವಾಧ್ಯಕ್ಷ ಸುಬ್ಬ ಪೂಜಾರಿ ಅತ್ತಿಕೇರಿ, ವಕೀಲ ವಸಂತ್‌ರಾಜ್ ಬೆಂಗಳೂರು, ಯಡ್ತರೆ ಗ್ರಾಪಂ ಸದಸ್ಯ ಲಲಿತಾ ನಾಗಪ್ಪ ಮರಾಠಿ, ಶಿರೂರು ಗ್ರಾಪಂ ಸದಸ್ಯ ರಘುರಾಮ ಕೆ. ಪೂಜಾರಿ, ಪತ್ರಕರ್ತ ಅರುಣ್‌ಕುಮರ್ ಉಪಸ್ಥಿತರಿದ್ದರು. ಮಹದೇವ ಮರಾಠಿ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿ, ರಾಜು ಮರಾಠಿ ವಂದಿಸಿದರು.

 

Exit mobile version