Site icon Kundapra.com ಕುಂದಾಪ್ರ ಡಾಟ್ ಕಾಂ

ಬಿದ್ಕಲ್‌ಕಟ್ಟೆ ಶಾಲೆ : ಚಾರಣ ಶಾಲಾ ಮಾಸ ಪತ್ರಿಕೆ ಅನಾವರಣ ಮತ್ತು ವಿಜ್ಞಾನ ವಸ್ತು ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಗು ತನ್ನ ಸುತ್ತಲಿನ ಜನರರೊಂದಿಗೆ ಮುಕ್ತವಾಗಿ ಬೆರೆಯಲು ಭಾಷೆ ಅನಿವಾರ್ಯ. ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಮಾತೃಭಾಷೆ ದಾರಿದೀಪವಾಗುತ್ತದೆ. ಯಾವುದೇ ಭಾಷೆಯನ್ನು ಕಲಿಯಬೇಕಾದರೂ ಮಾತೃಭಾಷೆಯಲ್ಲಿ ಗಟ್ಟಿತನ ಅಗತ್ಯ. ಆದ್ದರಿಂದ ತಾಯಿಭಾಷೆಯ ಮೇಲೆ ಹಿಡಿತ ಸಾಧಿಸದೇ ಇನ್ನೊಂದು ಭಾಷೆಯನ್ನು ಕಲಿತರೂ ಅದು ನಿಷ್ಪ್ರಯೋಜಕ. ಆದ್ದರಿಂದ ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಲು ಮಕ್ಕಳಿಗೆ ಎಳವೆಯಲ್ಲೇ ಅನೇಕ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಈ ದಿಸೆಯಲ್ಲಿ ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಹಮ್ಮಿಕೊಂಡಿರುವ ಚಾರಣ ಮಾಸಪತ್ರಿಕೆಯ ಅನಾವರಣ ಕಾರ್ಯಕ್ರಮ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಒಂದು ಅತ್ಯುತ್ತಮ ಸೃಜನಶೀಲ ಚಟುವಟಿಕೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತೀಶ ಅಡಿಗ ಮತ್ಯಾಡಿ ಇವರು ತಮ್ಮ ಮಗ ವಿಕಾಸನ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಮಾಸ ಪತ್ರಿಕೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಬಳಿಕ ಸರ್ವ ಪೋಷಕರ ಸಭೆಯನ್ನುದ್ಧೇಶಿಸಿ ಮಾತನಾಡಿ, ಕನ್ನಡ ಶಾಲೆಯಲ್ಲಿ ಓದಿಸುತ್ತಿರುವ ಎಲ್ಲ ಪೋಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಮಧುಕರ ಎಸ್, ಪತ್ರಿಕಾ ಪ್ರಾಯೋಜಕರಾದ ಸತೀಶ ಅಡಿಗ ಮತ್ಯಾಡಿ, ಮುಖ್ಯೋಪಾಧ್ಯಾಯರಾದ ನಾಗರತ್ನ ಹೆಬ್ಬಾರ್, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ರಮಣಿ, ಜ್ಯೋತಿಲಕ್ಷ್ಮೀ, ಚಿತ್ರಾ , ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕಿ ನಾಗರತ್ನ ಸ್ವಾಗತಿಸಿದರೆ, ಚಾರಣದ ಸಂಪಾದಕರಾದ ಸತೀಶ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಶಿಕ್ಷಕಿ ಭಾರತಿ ವಂದಿಸಿದರು. ಸಹ ಶಿಕ್ಷಕಿ ಚಿತ್ರಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version