ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕೂಡು ಕುಟುಂಬದಿಂದ ಒಂಟಿ ಕುಟುಂಬ ಆಯ್ತು. ಕೃಷಿಯಿಂದ ಸ್ವಾಪ್ಟ್ ವೇರ್ ಬಂತು. ಹೀಗೆ ಕುಟುಂಬದಿಂದ ಬೇರೆ ಬೇರೆ ಕಾರಣದಿಂದ ಹೊರ ಬಂದು ವಿಶ್ವದಾದ್ಯಂತ ಹಂಚಿಹೋದ ಕುಟುಂಬ ಸದಸ್ಯರಲ್ಲಿ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಆಧುನಿಕ ಯುಗ ಇದು. ಹೀಗಿರುವಾಗ ದೂರ ದೂರ ಹಂಚಿಹೋದ ಸುಮಾರು 200 ವರ್ಷದ ಹಿಂದಿನ ತಮ್ಮ ಪೂರ್ವಜರ ಸಂತತಿಯನ್ನು ಅರಸಿ ಸುಮಾರು ಎಂಟು ತಲೆಮಾರಿನ ಸಹೋದರ ಸಹೋದರಿಯರ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಒಂದಾಗಿ ತಮ್ಮ ಕಟುಂಬೋತ್ಸವವನ್ನು ಆಚರಿಕೊಂಡ ಅಪರೂಪದ ಆದರ್ಶ ಕಾರ್ಯಕ್ರಮ ಒಂದು ಇತ್ತೀಚೆಗೆ ಉಪ್ಪುಂದದ ಪ್ರಭು ಮನೆತನದಲ್ಲಿ ಜರುಗಿತು.
ಯಾವುದೇ ಧಾರ್ಮಿಕ ಹಿನ್ನೆಲೆ ಇರದೇ ಕುಟುಂಬದ ಹಿರಿಯ ಸದಸ್ಯರ ಮನೆ ಅಂಗಳದಲ್ಲೇ ಆಯೋಜನೆ ಗೊಂಡ ಒಂದು ದಿನದ ಈ ಸಮ್ಮೇಳನವನ್ನು ಇಂದಿನ ತಲೆಮಾರಿನ ಹಿರಿಯರಾದ ಉಪ್ಪುಂದದ ಶ್ರೀಧರ ಪ್ರಭುರವರು ಉದ್ಗಾಟಿಸಿದರು. ಅವರು ಮಾತನಾಡಿ ‘ಗೋವಾದಿಂದ ವಲಸೆ ಬಂದು ಹಲವು ಕಡೆ ನೆಲೆನಿಂತ ನಮ್ಮ ಕುಟುಂಬದ ಪೂರ್ವಜರ ಸಂಪೂರ್ಣ ಇತಿಹಾಸ ಇನ್ನೂ ಸಿಗದಿದ್ದರೂ ನಮಗಿಂತ ನಾಲ್ಕೈದು ತಲೆಮಾರಿನ ಹಿಂದಿನ ಅಂದಾಜು ಮಾಹಿತಿಯಂತೆ ದಿ.ರಮಣಯ್ಯ ಪ್ರಭುರವರವರ ವಂಶವೃಕ್ಷದ ಹತ್ತಾರು ಕವಲುಗಳು ನಾವಿಂದು ಒಂದಾಗಿದ್ದೇವೆ. ಹೀಗೆ ನಿಮ್ಮನ್ನೆಲ್ಲ ಒಟ್ಟಗೇ ನೋಡುವ ಅವಕಾಶ ನನ್ನ ಭಾಗ್ಯ’ ಎಂದು ಭಾವುಕರಾದರು.
‘ಸಂಬಂಧ ಉಳಿಯುವುದು ರಕ್ತದಿಂದಲ್ಲ ಸಂಪರ್ಕದಿಂದ, ನಮ್ಮ ಕುಟುಂಬದವರನ್ನು ಒಮ್ಮೆ ಒಂದು ಸೇರಿಸ ಬೇಕು ಎಂಬ ನನ್ನ ಪತ್ನಿಯ ಆಸೆ ಇತ್ತು. ಆದರೆ ಅವಳ ಜೀವಿತಾವಧಿಯಲ್ಲಿ ಮಾಡಲಾಗಿಲ್ಲ. ಅವಳ ಆಸೆಯಂತೆ ಕುವೈತ್ ಮುಂಬಯಿ ಗೋವಾ ಬೆಂಗಳೂರು ರಾಯಚೂರು ಮಂಗಳೂರು ಉಡುಪಿ ಕುಂದಾಪುರ ಶಿರೂರು ಮುಂತಾದ ಊರುಗಳಲ್ಲಿ ನೆಲೆಕಂಡ ಹಿರಿಕಿರಿಯ ಸದಸ್ಯರನ್ನು ಸಾಧ್ಯವಿದ್ದಷ್ಟು ಅರಸಿ ವಂಶವೃಕ್ಷ ನಿರ್ಮಿಸಿ ಒಂದು ದಿನದ ಈ ಸಂಬಂಧ ಸಮ್ಮೇಳನವನ್ನು ನಮ್ಮ ಮನೆಯಲ್ಲೇ ಆಯೋಜಿಸಿದ್ದೇನೆ’ ಎಂದು ಅತಿಥೇಯರಾದ ಉಪ್ಪುಂದ ಕಮಲಾಕ್ಷ ಪ್ರಭು ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಮುಂಜಾನೆಯ ಉಪಹಾರದಿಂದ ರಾತ್ರಿ ಊಟದ ತನಕ ನಡೆದ ಈ ವಿಭಿನ್ನ ಮೇಳದಲ್ಲಿ ಕುಟುಂಬದ ಹೆಚ್ಚಿನ ಸದಸ್ಯರೂ ತಮ್ಮ ತಮ್ಮ ಹಿಂದಿನ ಕಷ್ಟ ನೋವು ಖುಷಿ ಹಾಗೂ ಸಹಬಾಳ್ವೆಯ ಅನುಭವ ಅಭಿಪ್ರಾಯ ಹಂಚಿಕೊಂಡರು. ಯಾವುದೋ ಕಾರಣಕ್ಕೆ ಊರಿಂದ ದೂರವಾಗಿದ್ದ ನಾವು ಇನ್ನು ಪ್ರೀತಿಯ ಮನಸ್ಸಿನಿಂದ ಸದಾ ಹತ್ತಿರ ಆಗಬೇಕು, ವರ್ಷವರ್ಷವೂ ಹೀಗೆ ಒಂದಾಗುತ್ತಿರಬೇಕು ಎಂಬ ಪ್ರತೀ ಯೊಬ್ಬರ ಅಂತಕರಣದ ಮಾತಿಗೂ ಸಭಿಕರ ಕಣ್ಣು ಮಂಜಾಗುತ್ತಿರುವುದು ಕುಟುಂಬ ಸೆಳೆತದ ದ್ಯೋತಕವಾಗಿತ್ತು.
ಕುಟುಂಬದ ವಾರ್ಷಿಕ ಚೌತಿ ಗಣೇಶ ಪೂಜೆ ನಮ್ಮ ಮನೆಯಲ್ಲಿ ನಡೆಯುತ್ತಿದ್ದು ಕೌಟುಂಬಿಕರು ಪ್ರತೀ ವರುಷವೂ ಬಂದು ಪಾಲ್ಗೊಳ್ಳಿ ಎಂದು ಬಿ ಗಣಪತಿ ಪ್ರಭು ವಿನಂತಿಸಿದರು. ಸಭೆಯಲ್ಲಿ ಕುಟುಂಬದ ಹಿರಿಯರಾಗಿ ಲೀಲಾವತಿ ಗಣಪತಿ ಪ್ರಭು, ಸೀತಾ ಬಾಯಿ ಲಕ್ಷ್ಮೀನಾರಾಯಣ ಪ್ರಭು, ಸುಗುಣಾ ವಾಮನ ಪ್ರಭು ಉಪಸ್ಥಿತರಿದ್ದರು. ಡಿ ವಾಮನ ಕಾಮತ್ ಮಂಗಳೂರು, ಡಾ ಎಸ್ ಎನ್ ಪಡಿಯಾರ ಉಪ್ಪುಂದ, ಡಿ ಗೋಪಾಲ ಕಾಮತ್ ಸಿದ್ಧಾಪುರ ಅನಂತ ಕೃಷ್ಣ ಭಟ್ ಉಪ್ಪುಂದ ಚಂದ್ರಶೇಖರ್ ಭಟ್ ಉಪ್ಪುಂದ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈವಾಹಿಕ ಬೆಳ್ಳಿ ವರ್ಷ ಆಚರಿಸಿಕೊಳ್ಳುತ್ತಿರುವ ಮಂಗಳೂರಿನ ನರೇಂದ್ರ ರಾವ್ ಹಾಗೂ ವಿನಯಾ ರಾವ್ ದಂಪತಿಯನ್ನು ಕುಟುಂಬದ ವತಿಯಿಂದ ಅಭಿನಂದಿಸಲಾಯಿತು.
ರಾಯಚೂರಿನ ಸದಾನಂದ ಪ್ರಭು ಸ್ವಾಗತಿಸಿದರು, ಮುಂಬಯಿಯ ಗೋವರ್ಧನ ಪ್ರಭು ವಂಶವೃಕ್ಷವನ್ನು ಪರಿಚಯಿಸಿದರು, ಅನುರಾಧ ನಂದಾ ಪೈ ಪ್ರಾರ್ಥಿಸಿದರು. ಓಂಗಣೇಶ್ ಉಪ್ಪುಂದ ನಿರೂಪಿಸಿದರು. ಕೊನೇಯಲ್ಲಿ ಹಾಡು ನೃತ್ಯದೊಂದಿಗೆ ಸಮ್ಮೇಳನ ಮುಕ್ತಾಯ ಗೊಂಡಿತು.

