Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಳವು

 

ಉಪ್ಪುಂದ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಗೌಡ ಸಾರಸ್ವತ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ಅಧಿಕ ಪ್ರಮಾಣದ ಬೆಳ್ಳಿ, ಚಿನ್ನ ಕಳ್ಳತನವಾದ ಘಟನೆ ನಡೆದಿದೆ. ಗರ್ಭಗುಡಿಯ ಹೊರಗಿನ ಹಾಗೂ ಗರ್ಭಗುಡಿಯ ಬಾಗಿಲನ್ನು ಆಯುಧಗಳಿಂದ ಮೀಟಿ ತೆಗೆದು ಅಲ್ಲಿರುವ ಬೆಳ್ಳಿ ಕವಚ ಹೊಂದಿರುವ ದೇವರ ಮೂರ್ತಿ, ಎರಡು ಪ್ರಭಾವಳಿ, ಬೆಳ್ಳಿಯ ಪರಿಕರಗಳು, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಬೆಳಿಗ್ಗೆ ಪೂಜೆಗೆಂದು ಬಂದ ಅರ್ಚಕರು, ಪ್ರಧಾನ ದ್ವಾರದ ಬಾಗಿಲುಗಳಿಗೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಸಂಬಂಧಿಸಿದವರಿಗೆ ವಿಷಯ ತಿಳಿಸಿದ್ದು, ನಂತರ ಇನ್ನೊಂದು ದ್ವಾರದ ಮೂಲಕ ಒಳಗೆ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿರುವ ಮೂರೂ ಮೂರ್ತಿಗಳು ಕಾಣೆಯಗಿದ್ದವು. ನಂತರ ಪರಿಶೀಲಿಸಿದಾಗ ಕಳುವಾದ ಸಾಮಗ್ರಿಗಳ ವಿಚಾರ ಗೊತ್ತಾಗಿದೆ.

ನಂತರ ಸುಮಾರು 10 ಗಂಟೆಗೆ ದೇವಳದ ಹಿಂದಿರುವ ಮರ್ಲಮ್ಮಬೆಟ್ಟು (ದೈವದಮನೆ) ಎಂಬಲ್ಲಿ ದೇವರ ಪೀಠ, ಬೆಳ್ಳಿ ಕವಚ ರಹಿತ ದೇವರ ಚಂದನ ಮೂರ್ತಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಬೆಳ್ಳಿಯ ಪ್ರಭಾವಳಿ ಹಾಗೂ ಇತರೇ ಸ್ವಲ್ಪ ಬೆಳ್ಳಿಯ ಪರಿಕರಗಳು ಸಿಕ್ಕಿದ್ದು, ಇವುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಗುರುವಾರ ದೇವಳದ ಹತ್ತಿರವಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ಮಂದರ್ತಿ ಮೇಳದ ಬಯಲಾಟ ಇದ್ದರಿಂದ ಕೆಲವರು ಯಕ್ಷಗಾನ ನೋಡಿ ಹಿಂತಿರುಗುವಾಗ ದುರ್ಗಾಂಬಾ ಬಾರ್ ಹಿಂದೆ ತುಂಬಿದ ಚೀಲ ಹಿಡಿದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದವನನ್ನು ಪ್ರಶ್ನಿಸಿದ್ದರಿಂದ ಆತ ಹೆದರಿ ಚೀಲವನ್ನು ಎಸೆದು ಪರಾರಿಯಾಗಿದ್ದಾನೆ. ಅವರು ಈ ವಿಷಯವನ್ನು ಪೋಲಿಸರಿಗೆ ತಿಳಿಸಿದ್ದರಿಂದ ಇವಿಷ್ಟು ವಸ್ತುಗಳು ದೊರಕುವಂತಾಯಿತು. ಉಳಿದ ಸುಮಾರು ಸುಮಾರು 12,72,500 ರೂ. ಮೌಲ್ಯದ 25 ಕೆಜಿ ಬೆಳ್ಳಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಬೇಕಿದೆ.

ಘಟನಾ ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುಣಗ, ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್. ಆಗಮಿಸಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು, ಶ್ವಾನದಳ ತಪಾಸಣೆ ನಡೆಸಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Exit mobile version