Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮಾತೃ ವಂದನ ಕಾರ್ಯಕ್ರಮ

?

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಪುಟ್ಟ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ತೊಳೆದು, ಪುಷ್ಪಗಳನ್ನು ಅರ್ಪಿಸಿ ಆರತಿ ಬೆಳಗುತ್ತಾ ತಾಯಿಯನ್ನು ಪೂಜಿಸಿ ವಂದಿಸುವ ಆ ಸುಂದರ ಅಪರೂಪದ ದೃಶ್ಯ ಕಂಡು ಬಂದಿದ್ದು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ.

ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಮಂಗಳವಾರ ಜರಗಿದ ವಿನೂತನವಾದ ಮಾತೃ ವಂದನ ಕಾರ್ಯಕ್ರಮ ಶಾರದಾ ಮಂಟಪದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಜನರು ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದ ಅಪರೂಪದ ಆ ಸುಂದರ ಅದ್ಭುತ ಕ್ಷಣಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಓಡಿ ಆಡಿ ನಲಿದಾಡುತ್ತಿದ್ದ ಆ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ನೀರಿನಿಂದ ತೊಳೆದು ತಾಯಿಯ ಪಾದಗಳಲ್ಲಿ ಪುಷ್ಪಾರ್ಚನೆ ಮಾಡಿ ತಂದೆ ತಾಯಿಗೆ ಆರತಿ ಬೆಳಗಿ ಪೂಜಿಸಿ ನಮಿಸುತ್ತಿರುವ ಆ ಕ್ಷಣ ಎಲ್ಲರನ್ನು ರೋಮಾಂಚನಗೊಳಿಸಿತು. ಶಿಶು ಮಂದಿರದ ಪುಟಾಣಿಗಳು, ಬಾಲ ಗೋಕುಲದ ಮಕ್ಕಳು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.

ಮಕ್ಕಳಿಗೆ ಬಾಲ್ಯದಲ್ಲಿ ಹೆತ್ತವರ ಬಗ್ಗೆ ಗೌರವ ಪ್ರೀತಿ ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿರುವ ಮಾತೃ ವಂದನ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸು ಎಂದು ಸಂತರು ಹೇಳಿದ ಮಾತನ್ನು ನಾವು ಜೀವನದಲ್ಲಿ ಪಾಲಿಸಲು ಮುಂದಾಗಬೇಕು. ತಾಯಿಗಿಂತ ಶ್ರೇಷ್ಠವಾದ ದೇವರು ಈ ಭೂಮಿಯಲ್ಲಿ ಬೇರೆಯಿಲ್ಲ. ತಾಯಿಗೆ ಗೌರವ ನೀಡದಿದ್ದರೆ ನಮ್ಮ ಜೀವನ ನಿಷ್ಪ್ರಯೋಜಕವಾಗುತ್ತದೆ ಎಂಬಿತ್ಯಾದಿ ಮಾತುಗಳು ಮುದ ನೀಡುವಂತಿದ್ದವು.ಒಟ್ಟಾರೆಯಾಗಿ ಹಿರಿಯರು ದೇವರನ್ನು ಪೂಜಿಸುವ ರೀತಿಯಲ್ಲಿಯೇ ಪುಟಾಣಿ ಮಕ್ಕಳು ತಾಯಿಯನ್ನು ಪೂಜಿಸಿ ಗೌರವಿಸುವ ಮಾತೃ ವಂದನ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುವಂತಾಗಲಿ ಎಂಬುದು ಮಕ್ಕಳ ಪೋಷಕರ, ಪಾಲಕರ ಆಸೆಯಾಗಿದೆ.

 

 

Exit mobile version