Kundapra.com ಕುಂದಾಪ್ರ ಡಾಟ್ ಕಾಂ

ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಹಾಲಾಡಿಗೆ ಟಿಕೆಟ್, ಬೈಂದೂರಿಗೆ ಅಂತಿಮಗೊಂಡಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಬಹತೇಕ ಹಾಲಿ ಶಾಸಕರು ಹಾಗೂ ಗೊಂದಲವಿಲ್ಲದ 72 ಕ್ಷೇತ್ರಗಳ ಅಭ್ಯರ್ಥೀಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ದೊರೆತಿದ್ದು, ಬೈಂದೂರು ಕ್ಷೇತ್ರದಲ್ಲಿ ಯಾರು ಸ್ವರ್ಧಿಸಲಿದ್ದಾರೆ ಎಂಬುದು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿಲ್ಲ.

ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಳೆದ ಭಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ನೊಂದು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವರ್ಧಿಸಿ ವಿಜಯಿಯಾಗಿದ್ದರು. ಆ ಬಳಿಕವೂ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದ ಅವರು ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರನ್ನು ಸೇರ್ಪಡೆಗೂ ಮೊದಲೇ ಬಿಜೆಪಿಯ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದರು. ಈ ನಡುವೆ ಹಾಲಾಡಿ ನಡೆಯ ಬಗ್ಗೆ ಅಪಸ್ವರ ಹೊಂದಿದ್ದ ಮೂಲ ಬಿಜೆಪಿಗರು ಹಾಗೂ ಹಾಲಾಡಿ ನಡುವಿನ ಭಿನ್ನಮತ ಸ್ಪೋಟಗೊಂಡು ಹಾಲಾಡಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರ ಬಿಜೆಪಿ ಸೇರ್ಪಡೆಯಿಂದಾಗಿ ಕುಂದಾಪುರ ಕ್ಷೇತ್ರದಲ್ಲಿ ಟಿಕೇಟ್ ಯಾರಿಗೆ ದೊರೆಯಲಿದೆ ಎಂಬ ಗೊಂದಲವಿತ್ತು. ಆದರೆ ಅಂತಿಮವಾಗಿ ಟಿಕೇಟ್ ಗಿಟ್ಟಿಸಿಕೊಳ್ಳಲು ಹಾಲಾಡಿ ಅವರು ಯಶಸ್ವಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಯಾರಿಗೆ ನೀಡಲಿದ್ದಾರೆ ಎಂಬ ಕುತೂಹಲ ಬಿಜೆಪಿ ಪಾಳಯದಲ್ಲಿ ಮೂಡಿದ್ದು, ಎರಡನೇ ಪಟ್ಟಿಯಲ್ಲಿ ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಕಳೆದ ಭಾರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಟಿಕೇಟ್ ಸಿಗಬಹುದೆಂಬ ನಿರೀಕ್ಷೆಯಿದೆಯಾದರೂ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಥವಾ ಹೊಸ ಮುಖಗಳಿಗೆ ಟಿಕೇಟ್ ನೀಡಬಹುದು ಎಂಬ ಮಾತುಗಳೂ ಕೇಳಿಬಂದಿದ್ದವು. ಸುಕುಮಾರ ಶೆಟ್ಟಿ ಅವರ ಪರ ಬೈಂದೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಒಲವು ತೋರಿದ್ದರು. ಆದರೆ ಬಿಜೆಪಿ ಪಕ್ಷ ಗೆಲ್ಲುವ ಅಭ್ಯರ್ಥಿಯ ಹುಡುಕಾಟದಲ್ಲಿದ್ದರು, ಗ್ರೌಂಡ್ ರಿಪೋರ್ಟ್ ಸ್ಪಷ್ಟವಾದ ಬಳಿಕವಷ್ಟೇ ಟಿಕೇಟ್ ನೀಡಲಿದೆ ಎನ್ನಲಾಗಿದೆ.

 

Exit mobile version