ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಜನರು ಶಿಕ್ಷಣ ಮತ್ತು ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಸದೃಢ ಸಮಾಜ, ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಯಾವುದೇ ರೋಗ ಬರುವ ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಶೆಣೈ ಕೆ. ಹೇಳಿದರು.
ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಗಂಗಾಮೃತ ಯೋಜನೆಯ ಭಾಗವಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಲು ಸಾಧ್ಯವಾಗುತ್ತದೆ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ನಿರಂತರ ತಪಾಸಣೆ, ಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞರಾದ ಡಾ. ದಿನೇಶ ಎಂ.ನಾಯಕ್ ಉಡುಪಿ, ರಮ್ಯಾ ಭಂಡಾರ್‌ಕಾರ್ ಮಣಿಪಾಲ, ಮೂಳೆ ತಜ್ಞ ಡಾ.ರಾಜಾರಾಮ ಪೈ ಉಡುಪಿ, ಡಾ.ಅಜಯ್ ಭಂಡಾರ್‌ಕಾರ್, ಫಿಜಿಶಿಯನ್ ಡಾ.ಕಾರ್ತಿಕ್ ರಾವ್, ನೇತ್ರ ತಜ್ಞ ಡಾ.ಅಜಿತ್ ಶೆಣೈ, ಸ್ತ್ರೀರೋಗ ತಜ್ಞೆ ಡಾ.ದೀಪಾ ರಾವ್ ಮತ್ತಿತರರು ಉಪಸ್ಥಿತರಿದ್ದರು.
ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಗಂಗಾಮೃತ ಯೋಜನೆಯ ಉಸ್ತುವಾರಿ ಜಿ.ವೆಂಕಟೇಶ ನಾಯಕ್ ವಂದಿಸಿದರು.