Kundapra.com ಕುಂದಾಪ್ರ ಡಾಟ್ ಕಾಂ

ಮನುಷ್ಯನಿಗೆ ಆಧ್ಯಾತ್ಮಿಕ ಬದುಕು ಅಗತ್ಯ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಮರವಂತೆ: ಜೀವಜಗತ್ತಿನಲ್ಲಿ ಮನುಷ್ಯನಿಗೆ ಮಾತ್ರ ಮನಸ್ಸು, ಬುದ್ಧಿ ಮತ್ತು ಕ್ರಿಯಾಶಕ್ತಿ ಇದೆ. ಹಾಗಾಗಿ ಅವನು ಜೀವಿಗಳಲ್ಲೆಲ್ಲ ಶ್ರೇಷ್ಠ. ಅವನಲ್ಲಿ ಮೃಗೀಯ ವರ್ತನೆ ಇರಕೂಡದು. ಅವನು ಸಾಮಾಜಿಕವಾಗಿ ಬದುಕುವಾಗ ಅದರ ಜೊತೆಗೆ ಆಧ್ಯಾತ್ಮಿಕ ಬದುಕೂ ಅಗತ್ಯ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

   ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು.

   ಬದುಕಿನಲ್ಲಿ ನಾವಂದುಕೊಂಡಂತೆ ಏನೂ ಆಗುವುದಿಲ್ಲ. ಭಗವಂತನ ಇಚ್ಛೆಯಂತೆ ಎಲ್ಲವೂ ಆಗುತ್ತದೆ. ಬದುಕಿನಲ್ಲಿ ಶ್ರೇಯಸ್ಸು ಉಂಟಾಗಬೇಕಾದರೆ ಭಗವಂತನ ಇಚ್ಛೆಗೆ ನಮ್ಮ ಇಚ್ಛೆ ಅಧೀನವಾಗಿರುವಂತೆ ನಾವು ನೋಡಿಕೊಳ್ಳಬೇಕು ಎಂದು ಅವರು ನುಡಿದರು.

   ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ. ಚಂದ್ರಶೇಖರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಇಡಗುಂಜಿ ಮಹಾಗಣಪತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ಜಿ. ಜಿ. ಸಭಾಹಿತ್ ಧಾರ್ಮಿಕ ಪ್ರವಚನ ನೀಡಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ, ಉದ್ಯಮಿ ವಿ. ಕೆ. ಕಾಮತ್, ನಾಡದ ಸಾಮಾಜಿಕ ಮುಖಂಡ ಸತೀಶ ಎಂ. ನಾಯಕ್, ಕಂಚಗೋಡು ರಾಮಮಂದಿರದ ಗೌರವಾಧ್ಯಕ್ಷ ಚೌಕಿ ಮೋಹನ ಖಾರ್ವಿ, ಮರವಂತೆ ಮೀನುಗಾರರ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಜಿ. ಆನಂದ ಖಾರ್ವಿ, ಚಂದ್ರ ಖಾರ್ವಿ, ಉದ್ಯಮಿ ಬಿ. ಸತೀಶ ಶೇಟ್, ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ತಿಮ್ಮ ದೇವಾಡಿಗ, ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ಶ್ರೀಧರ ಖಾರ್ವಿ, ಧಾರ್ಮಿಕ ಮುಖಂಡ ಕೃಷ್ಣಕುಮಾರ ಅತ್ರಿಜಾಲ ಅತಿಥಿಗಳಾಗಿದ್ದರು.

   ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಭಾಸ್ಕರ ಖಾರ್ವಿ ವಂದಿಸಿದರು. ರಾಘವೇಂದ್ರ ಕಾಂಚನ್ ನಿರೂಪಿಸಿದರು. 32 ವರ್ಷ ದೇವಾಲಯದ ಆಡಳಿತ ಧರ್ಮದರ್ಶಿಳಾಗಿ ದುಡಿದಿದ್ದ ಕೆ. ಚಂದ್ರಶೇಖರ ಹೆಬ್ಬಾರ್ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು.

ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ೩೨ ವರ್ಷ ದೇವಸ್ಥಾನ ಆಡಳಿತ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದ್ದ ಕೆ. ಚಂದ್ರಶೇಖರ ಹೆಬ್ಬಾರ್ ದಂಪತಿಯನ್ನು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಗೌರವಿಸಿ, ಹರಸಿದರು./

Exit mobile version