ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಿಸುಮಾರು ಕಳೆದ 40 ವರ್ಷದ ಹಿಂದೆ ಹಳಿಹುಲ್ಲು ಗುಡಿಯಲ್ಲಿ ಕಲ್ಲಿನ ಶಿವಲಿಂಗವಿದ್ದ ಶ್ರೀ ಸಿದ್ದೇಶ್ವರ ಭಜನಾ ಮಂದಿರ ವೈಭದ ಭವ್ಯಮಂದಿರದಲ್ಲಿ ಪುನರ್ ಪ್ರತಿಷ್ಠಾಪನೆಗೊಳ್ಳಲಿದ್ದು, ಎ.28 ರಿಂದ 30ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನೋರಂಜನಾ ಕಾರ‍್ಯಕ್ರಮ ನಡೆಯಲಿದೆ.
ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಾದದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಪುನರ್ ಪ್ರತಿಷ್ಠೆ, ನವೀಕೃತ ಮಂದಿರ ಉದ್ಘಾಟನೆಗೊಳ್ಳಲಿದ್ದು, ಸಾಗರ ತಾಳಗುಪ್ಪ ಕೂಡ್ಲಿ ಮಠ ಶ್ರೀ ಸಿದ್ಧವೀರ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಮ್ಮುಖದಲ್ಲಿ ಬ್ರಹ್ಮಕಲಶೋತ್ಸವ, ಪೂರ್ಣಾಹುತಿ ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡಿಲಿದ್ದಾರೆ.
ಸಿದ್ಧಲಿಂಗೇಶ್ವರ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಕಲಾತತ್ವ ಹೋಮ, 49 ಕಲಶ ಸ್ಥಾಪನೆ, ರಕ್ಷ ವಿಧಿಯೊಂದಿಗೆ ಮಂಗಳ ಕಾರ‍್ಯಕ್ರಮ ನಡೆಯಲಿದೆ. ಹಿಂದೆ ಮಳಿ ಹುಲ್ಲಿನ ಗುಡಿಸಲ ನಂತರ ಹೆಂಚಿನ ಕಟ್ಟಡಕ್ಕೆ ಸ್ಥಳಾಂತ ಗೊಂಡಿದ್ದು, ಪ್ರಸಕ್ತ 15 ಲಕ್ಷಕ್ಕೂ ಮಿಕ್ಕ ವೆಚ್ಚದಲ್ಲಿ ಭೌವ್ಯಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಶ್ರೀ ಸಿದ್ದೇಶ್ವರ ಭಜನಾ ಮಂದಿರ ಉಪ್ಪಾರಗೌಡ ವೀರಶೈವ ಮತಾವಲಂಬಿಗಳು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ಇತಿಹಾಸ..
ಹಕ್ಲಾಡಿ ಗುಡ್ಡೆಯಲ್ಲಿ ಹಿಂದೆ ಕೂಲಿ ಕೆಲಸ ಮಾಡಿಕೊಂಡಿದ್ದ ಬಸವ ಎಂಬವರು ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂದಿರ ಹಿಂದಿರುವ ವ್ಯಕ್ತಿ. ರಾತ್ರಿ ಶಿವ ಕನಸಲ್ಲಿ ಬಂದು ಶಿವ ಸನ್ನಿಧಿ ಇಲ್ಲಿ ಸ್ಥಾಪಿಸಿದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ಹಕ್ಲಾಡಿ ಗುಡ್ಡೆಯಲ್ಲಿ ಶಿವ ಮಂದಿರ ತಲೆ ಎತ್ತಿದ್ದು, ಶ್ರೀ ಸಿದ್ಧೇಶ್ವರ ಭಜನಾ ಮಂದಿರ ಎಂದು ನಾಮಕರಣಗೊಂಡಿತು.
ಬಸವ ಮೊದಲು ಕೆಂಪುಕಲ್ಲಿನಲ್ಲಿ ಈಶ್ವರ ಲಿಂಗ ಕೆತ್ತಿ ಪ್ರತಿಷ್ಠಾಪನೆ ಮಾಡಿ, ಎರಡೂ ಹೊತ್ತು ಪೂಜೆ ಮಾಡಿಕೊಂಡು ಬರುತ್ತಿದ್ದರು. ಕಾಲಾಂತರ ಮೂರ್ತಿಯಲ್ಲಿ ಭಿನ್ನ ಕಾಣಿಸಿಕೊಂಡಿದ್ದರಿಂದ ನದಿಯಲ್ಲಿ ವಿಸರ್ಜಿಸಲಾಯಿತು. ವಿಸರ್ಜಿಸಿದ ಮೂರ್ತಿ ಬೇರೊಬ್ಬರಿಗೆ ಸಿಕ್ಕಿ ಪ್ರತಿಷ್ಠಿತ ದೇವಸ್ಥಾನದಲ್ಲಿ ಇದೆ ಎಂಬ ನಂಬಿಕೆ ಭಕ್ತರಿದ್ದು. ಕಳೆದ 40 ವರ್ಷದಿಂದ ಮಂದಿರದಲ್ಲಿ ಭಜನೆ ನಡೆದುಕೊಂಡು ಬಂದಿದ್ದು, ಶಿವರಾತ್ರಿ ಅಹೋರಾತ್ರಿ ಭಜನೆ, ಭಜನಾ ಸ್ಪರ್ಧೆ, ಮನೆ ಮನೆ ದೇವರ ಪ್ರತಿಬಿಂಬ ಜೊತೆ ಭಜನಾ ತಂಡ ಭೇಟಿ ನೀಡಿ ಪ್ರಸಾದ ವಿತರಣೆ ಭಜನಾ ಮಂದಿರದ ವಿಶೇಷ.
ಪ್ರತೀ ಸೋಮವಾರ ವಿಶೇಷ ಭಜನೆ, ಎರಡೂ ಹೊತ್ತು ಪೂಜೆ, 5 ದಿನ ಪರಿಯಂತ ಶಿವರಾತ್ರಿ ಉತ್ಸವ, ಉದ್ಯೋಗ, ವಿವಾಹ ಸಂಬಂಧ ಸಿದ್ದೇಶ್ವರನಲ್ಲಿ ಹರಸಿಕೊಂಡರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.
ಸಾಂಸ್ಕೃತಿಕ ಕಾರ‍್ಯಕ್ರಮ:
ಎ.29, ಬೆಳಗ್ಗೆ 10.30 ಕ್ಕೆ ಬಂಟ್ವಾಡಿಯಿಂದ ಆರಂಭವಾಗುವ ಪುರಮೆವಣಿಗೆಗೆ ಹಿರಿಯ ನಾಗರಿಕ ಆನಗಳ್ಳಿ ನರಸಿಂಹ ಶೆಟ್ಟಿ ಚಾಲನೆ ನೀಡಲಿದ್ದಾರೆ. ಹಕ್ಲಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇವೆಯಲ್ಲಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಕ್ಕೆ ತಾಲೂಕು ಮಟ್ಟದ ಭಜನಾ ಸ್ಪರ್ಧೆ ನಡೆಯಲಿದ್ದು, ಬಂಟ್ವಾಡಿ ನ್ಯೂ ಅನುದಾನಿತ ಶಾಲಾ ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್ ಚಾಲನೆ ನೀಡಲಿದ್ದಾರೆ.
ಎ.30 ರಂದು ಸಂಜೆಯಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದ್ದು, ರಾತ್ರಿ 10 ಕ್ಕೆ ಸಾಸ್ತಾನ ರಘು ಪಾಂಡೇಶ್ವರ ಸಾರಥ್ಯದಲ್ಲಿ ಸಾಧನಾ ಕಲಾತಂಡದವರಿಂದ ಎಲ್ಲಾ ಮಾಡದ್ ಅವ್ನೇ ನಗೆ ನಾಟಕ ನಡೆಯಲಿದೆ. ಹೊರೆ ಕಾಣಿಕೆ ಸಲ್ಲಿಸುವವರು ಎ.27 ರಂದು ಬೆಳಗ್ಗೆಯಿಂದ ಸಂಜೆ ತನಕ ಭಜನಾ ಮಂದಿರಲ್ಲಿ ಸಲ್ಲಿಸಬಹುದು.