Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಬಿಜೆಪಿ ಜಯ ಸಾಧಿಸುವ ಪೂರ್ಣ ವಿಶ್ವಾಸವಿದೆ: ಬಿಎಂಎಸ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸ್ವಾತಂತ್ರ್ಯ ಬಳಿಕ ಬೈಂದೂರು ವಿಧಾನಸಭಾ ಕ್ಷೇತ್ರ ಕೇವಲ ಶೇ.೧೦ರಷ್ಟು ಅಭಿವೃದ್ಧಿಯನ್ನಷ್ಟೇ ಕಂಡಿದೆ. ಕುಡಿಯುವ ನೀರು, ಆಸ್ಪತ್ರೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಾಲಿ ಶಾಸಕರು ವಿಫಲರಾಗಿದ್ದಾರೆ. ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಇಂಗಿತವಿದ್ದು, ಈ ಭಾರಿ ಮತದಾರರು ತನ್ನ ಕೈಹಿಡಿಯಲಿದ್ದಾರೆಂಬ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.

ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾವಣೆ ಸಮೀಸುತ್ತಿದ್ದಂತೆ ಶುಂಕುಸ್ಥಾಪನೆ ಮಾಡುವವರು ಕಳೆದ ಐದು ವರ್ಷಗಳ ಕಾಲ ಎಲ್ಲಿದ್ದರು. ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ, ಯಾವುದೂ ಕೂಡ ಅಭಿವೃದ್ಧಿಯನ್ನು ಕಂಡಿಲ್ಲ. ಯುವಕರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗಿಲ್ಲ ಎಂದು ಆರೋಪಿಸಿದ ಅವರು ಈ ಭಾರಿ ಬೈಂದೂರು ಕ್ಷೇತ್ರಾದ್ಯಂತ ತಿರುಗಾಟ ಮಾಡಿದ್ದು, ಪಕ್ಷದ ಕಾರ್ಯಕರ್ತರು ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸಿನಲ್ಲಿದ್ದಾರೆ. ಭಾರಿ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದರು.

ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಕೇಂದ್ರದ ಮೋದಿ ಸರಕಾರದ ಸಾಧನೆಗಳು ಹಾಗೂ ಕಳೆದ ಭಾರಿಯ ರಾಜ್ಯ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಈ ಭಾರಿ ಮತಯಾಚನೆಗೆ ತೆರಳುತ್ತಿದ್ದೇವೆ. ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಬಿ.ಎಂ ಸುಕುಮಾರ ಶೆಟ್ಟಿಯವರು ಕಳೆದ ಭಾರಿಯ ಸೋಲಿನ ಬಳಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕ್ಷೇತ್ರಾದ್ಯಂತ ಸಂಚರಿಸಿದ್ದಾರೆ. ಈ ಭಾರಿ ಅವರು ಗೆಲವು ಸಾಧಿಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭ ಬಿಜೆಪಿ ಕ್ಷೇತ್ರ ಸಂಚಾಲಕ ಪ್ರವೀಣ ಗುರ್ಮೆ, ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version