Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ವೆಂಕಟೇಶ ಪುರಾಣಿಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಸ್ಟ್ಯಾಟ್-100, ಎಕನಾಮಿಕ್ಸ್-99, ಬಿಜಿನೆಸ್-100, ಅಕೌಂಟೆನ್ಸಿ-100, ಸಂಸ್ಕೃತ100 ಹಾಗೂ ಇಂಗ್ಲೀಷ್ 96 ರಷ್ಟು ಅಂಕ ಪಡೆದುಕೊಂಡಿದ್ದಾನೆ.

ಕುಂದಾಪುರ ತಾಲೂಕು ಬಸ್ರೂರು ಮಾರ್ಗೋಳಿ ಸುಬ್ರಹ್ಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ಪುರಾಣಿಕ್ ಇಬ್ಬರು ಮಕ್ಕಳಲ್ಲಿ ವೆಂಕಟೇಶ್ ಹಿರಿಯ ಮಗ. ತಂಗಿ ವೈಷ್ಣವಿ ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ. ಬಸ್ರೂರು ಸರ್ಕಾರಿ ಪೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದು ವೆಂಕಟೇಶ್ ಹಿಂದಿನ ಸಾಧನೆ.

ಕುಂದಾಪ್ರ ಡಾಟ್ ಕಾಂಗೆ ವೆಂಕಟೇಶ್ ಪ್ರತಿಕ್ರಿಯಿಸಿ ದಿನಕ್ಕೆ ಮೂರು ಗಂಟೆ ಓದ್ತೆ. ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿ ಶಾಲೆಗೆ ಹೋತೆ. ಪ್ರಬಂಧ, ಕ್ವಿಜ್ ನಂಗೆ ತುಂಬಾ ಇಷ್ಟ ಆತ್ತೂ.. ಓದೂಕೆ ಅಂತ ಹಟಕ್ಕೆ ಬಿದ್ ಓತ್ತಿಲ್ಲೆ.. ಶಾಲೀಲಿ ಮಾಸ್ತರು ಹೇಳಿದ್ದೇ ಸಾಕಾತ್ತು.. ಮನೇಲೀ ಯಾರೂ ಓದು ಅಂತ ಒತ್ತಾಯ ಮಾಡ್ತಿಲ್ಲೆ.. ಮುಂದೆ ಸಿಎ ಮಾಡ್ತೆ ಎಂದಿದ್ದಾರೆ.

ನಾವು ಮನೆಯಲ್ಲಿ ಮಗನಿಗೆ ಓದುವಂತೆ ಒತ್ತಾಯ ಮಾಡೋದಿಲ್ಲ. ದಿನಕ್ಕೆ ಇಂತಿಷ್ಟೇ ಹೊತ್ತು ಓದಬೇಕು, ಇಷ್ಟೇ ಅಂಕ ಪಡೆಯಬೇಕು ಎಂದು ಒತ್ತಡ ಹಾಕುವುದಿಲ್ಲ. ಮಗನಿಗೆ ಮೆಮೋರಿ ಪವರ್ ಹೆಚ್ಚಿದ್ದರಿಂದ ಶಾಲೆಯಲ್ಲಿ ಅಧ್ಯಾಪಕರು ಹೇಳಿದ್ದೇ ಸಾಕಾಗುತ್ತದೆ. ಅಂಕ ಪಡೆಯಬೇಕು ಅಂತ ಓದಿದ್ದರೆ ಇನ್ನೂ ಹೆಚ್ಚಿನ ಅಂಕ ಪಡೆಯುತ್ತಿದ್ದ. ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಪಾಸಾದ ಮಗನ ಬಗ್ಗೆ ಹೆಮ್ಮೆಯಾಗುತ್ತದೆ ಎನ್ನೋದು ತಂದೆ ಸುಬ್ರಹ್ನಣ್ಯ ಪುರಾಣಿಕ್ ಅಭಿಪ್ರಾಯ. ಮುಂದೆ ಅವಿನಗೆ ಏನು ಇಷ್ಟವೋ ಅದನ್ನು ಆಯ್ಕೆ ಅವನೇ ಮಾಡಿಕೊಳ್ಳುವ ಸ್ವತಂತ್ರವಿದೆ. ನಾವು ಯಾವ ಒತ್ತಡ ಜೊತೆ ಇಂತಾದ್ದೇ ಓದಬೇಕು ಎಂದು ತಾಕೀತು ಮಾಡೋದಿಲ್ಲ ಎನ್ನೋದು ತಾಯಿ ಅನ್ನಪೂರ್ಣ ಎಸ್.ಪುರಾಣಿಕ್ ಹೇಳುತ್ತಾರೆ.

 

Exit mobile version