Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ದಾಖಲೆಯ ಗೆಲುವು ತಂದುಕೊಡಲಿದೆ: ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸೇತುವೆ, ರಸ್ತೆ, ಬಂದರು, ಸಮುದ್ರ ತಡೆಗೋಡೆ, ಬ್ರೇಕ್ ವಾಟರ್ ಕಾಮಗಾರಿ, ಶಾಲಾ ಕಾಲೇಜು ಅಭಿವೃದ್ಧಿ, ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸುಮಾರು ೨,೦೦೦ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬೈಂದೂರನ್ನು ತಾಲೂಕನ್ನಾಗಿಸಿದ್ದು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿಯ ದಾಖಲೆಯ ಜನರು ಅಭಿವೃದ್ಧಿ ಕಾರ್ಯವನ್ನು ಗುರುತಿಸಿ ಬೆಂಬಲಿಸಲಿದ್ದಾರೆ ಭರವಸೆಯಿದ್ದು, ಈ ಭಾರಿಯ ಚುನಾವಣೆಯಲ್ಲಿ ದಾಖಲೆಯ ಅಂತರದಿಂದ ಗೆಲುವ ಸಾಧಿಸುವ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೀನುಗಾರಿಕೆಗೆ ಅನುಕೂಲವಾಗುವಂತೆ ಗಂಗೊಳ್ಳಿ, ಶಿರೂರು ಕೊಡೇರಿ ಬ್ರೇಕ್‌ವಾಟರ್ ಕಾಮಗಾರಿ, ಸಮುದ್ರ ಕೊರೆತ ತಡೆಗಾಗಿ ಬಹುಪಾಲು ಕರಾವಳಿ ಭಾಗಗಳಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ, ಕ್ಷೇತ್ರದ ಪ್ರತಿ ಗ್ರಾಮಗಳಿಗೂ ರಸ್ತೆ, ಮರವಂತೆ, ಕನ್ನಡಕುದ್ರು, ಆಲೂರು, ಆಜ್ರಿ, ಬಗ್ವಾಡಿ ಮೊದಲಾದೆಡೆ ಸೇತುವೆ ಕಾಮಗಾರಿ, ಶಿರೂರು ಪದವಿಪೂರ್ವ ಕಾಲೇಜು, ಬಿಜೂರು, ಗುಜ್ಜಾಡಿ, ಆಲೂಕು ಪ್ರೌಢಶಾಲೆ ಸೇರಿದಂತೆ ಶಾಲಾ ಕಾಲೇಜುಗಳ ಅಭಿವೃದ್ಧಿ, ಸರಕಾರಿ ಆಸ್ಪತ್ರೆ ಉನ್ನತೀಕರಣ, ಶಿರೂರಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನ ಹೀಗೆ ಹಲವು ಕಾಮಗಾರಿಗಳು ನಡೆದಿವೆ. ೯೪ಸಿ ಹಕ್ಕುಪತ್ರ, ಪಡಿತರ ಚೀಟಿ, ಬಸವ ವಸತಿ ಹಾಗೂ ಮೀನುಗಾರಿಕಾ ಮನೆಗಳು, ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳು ಸೇರಿದಂತೆ ಹತ್ತಾರು ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು.

ಕುಡಿಯುವ ನೀರಿಗೆ ಆದ್ಯತೆ:

ಕ್ಷೇತ್ರದಲ್ಲಿ ಈಗಾಗಲೇ ಕುಡಿಯುವ ನೀರಿನ ಕೊರತೆ ನೀಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಡಾದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಬೈಂದೂರು ಯಡ್ತರೆ ಪಡುವರಿ ಗ್ರಾಮಗಳನ್ನು ಸೇರಿಸಿ ಮಾಡಲಾಗಿದ್ದ ಯೋಜನೆಗೆ ಕೊಂಕಣ್ ರೈಲ್ವೆಯಿಂದ ಅನುಮತಿ ದೊರೆಯುವುದು ದೊರೆಯುವುದು, ಚಿತ್ತೂರು ಗ್ರಾಮದಲ್ಲಿ ಸ್ಥಾಪಿಸಲು ಯೋಜಿಸಿರುವ ಕುಡಿಯುವ ನೀರಿನ ಯೋಜನೆಗೆ ಅನುಮತಿ ದೊರೆಯುವುದು ಬಾಕಿಯಿದೆ ಎಂದ ಅವರು ಅಂತರ್ಜಲ ಹೆಚ್ಚಳಕ್ಕಾಗಿ ಕ್ಷೇತ್ರಾದ್ಯಂತ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಶಿರೂರಿನಲ್ಲಿ ಜಪಾನ್ ಮಾದರಿಯಂತೆ ಸಮುದ್ರ ನೀರು ಶುದ್ಧಿಕರಣ ಘಟಕ ನಿರ್ಮಾಣವಾಗಲಿದ್ದು ಅದು ಯಶಸ್ವಿಯಾದರೆ ಕ್ಷೇತ್ರದ ಕರಾವಳಿಯಾದ್ಯಂತ ಅದೇ ಯೋಜನೆಯನ್ನು ಮುಂದಿವರಿಸುವ ಇಂಗಿತವಿದೆ ಎಂದರು. ವಾರಾಹಿ ಯೋಜನೆಯನ್ನು ವಿಸ್ತರಿಸಿ ಕಾವ್ರಾಡಿ ಭಾಗದಿಂದ ಸಿದ್ಧಾಪುರದ ತನಕ ಕುಡಿಯುವ ನೀರಿನ ಯೋಜನೆಗೆ ಶಾಶ್ವಾತ ಪರಿಹಾರ ಕಂಡುಕೊಳ್ಳುವ ಯೋಜನೆಯಿದೆ ಎಂದರು.

ಸಂಸದರೇಕೆ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು ಬಗ್ಗೆ ಮಾತನಾಡುತ್ತಿಲ್ಲ?

ಬೈಂದೂರಿನಲ್ಲಿ ವಿಮಾನನಿಲ್ದಾಣವಾಗಿಲ್ಲ, ಮೆಡಿಕಲ್ ಕಾಲೇಜು ಆಗಿಲ್ಲ ಎಂದು ಬೊಬ್ಬಿಡುವವರು ಕಳೆದ ಒಂಬತ್ತು ವರ್ಷದಿಂದ ಸಂಸದರಾಗಿರುವವರ ಬಳಿ ಯಾಕೆ ಪ್ರಶ್ನಿಸುತ್ತಿಲ್ಲ ಎಂದ ಗೋಪಾಲ ಪೂಜಾರಿ ಅವರು, ಜಿಲ್ಲೆಗೊಂದು ವಿಮಾನ ನಿಲ್ದಾಣ ಹಾಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಅವಕಾಶವಿದ್ದು ಈಗಾಗಲೇ ಬೈಂದೂರು ಒತ್ತಿನಣೆಯಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಸರ್ವೆ ನಡೆಸಿದ್ದಾರೆ. ಅನುಕೂಲಕರ ವಾತವರಣವಿದ್ದರೇ ವಿಮಾನ ನಿಲ್ದಾಣ ಆಗಿಯೇ ಆಗುತ್ತದೆ ಎಂದರು. ಜನಸಾಮಾನ್ಯರಿಗೆ ಅವಶ್ಯವಿರುವ ಬಸ್ ಸೌಕರ್ಯವನ್ನು ಕ್ಷೇತ್ರಾದ್ಯಂತ ಕಲ್ಪಿಸಲಾಗಿದೆ. ಇನ್ನೂ ಬೇಡಿಕೆಯಿದ್ದು ಬೈಂದೂರಿನಲ್ಲಿ ಡಿಪೋ ಆದ ಬಳಿಕ ಅದೂ ಈಡೇರಲಿದೆ. ವಿಮಾನ ನಿಲ್ದಾಣ ಹಾಗೂ ಮೆಡಿಕಲ್ ಕಾಲೇಜು ಆರಂಭಿಸುವುದು ಸಂಪುಟ ಸಚಿವರು ಕೈಗೊಳ್ಳುವ ನಿರ್ಧಾರವಾಗಿದ್ದು, ತಾನು ಈಗಾಗಲೇ ಪ್ರಸ್ತವನೆ ಸಲ್ಲಿಸಿದ್ದೇನೆ ಎಂದರು.

ಈ ಸಂದರ್ಭ ತಾ.ಪಂ ಮಾಜಿ ಸದಸ್ಯರಾದ ರಾಜು ಪೂಜಾರಿ, ಹೇಮಾ ರಾಜು ಪೂಜಾರಿ, ಭಾಸ್ಕರ ದೇವಾಡಿಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾ.ಪಂ ಸದಸ್ಯರಾದ ವಿಜಯ ಶೆಟ್ಟಿ, ಜಗದೀಶ ದೇವಾಡಿಗ, ಕಾಂಗ್ರೆಸ್ ಮುಖಂಡರುಗಳಾದ ರಘುರಾಮ ಶೆಟ್ಟಿ, ಗೋಕುಲ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಮಹಾಬಲ ಸೇರಿದಂತೆ ಇತರರರು ಉಪಸ್ಥಿತರಿದ್ದರು.

Exit mobile version