ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ಆರ್.ಎನ್.ಎಸ್ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಬಸ್ರೂರು ವೆಂಕಟೇಶ್ ಪುರಾಣಿಕ್ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದು ಅವರನ್ನು ಕುಂದಾಪುರ ತಾಲೂಕು ಹವ್ಯಕ ಸಭಾವತಿಯಿಂದ ಅವರ ಮನೆಗೆ ತೆರಳಿ ಫಲ-ಪುಷ್ಪ, ಸ್ಮರಣಿಕೆ, ನಗದು ನೀಡಿ ಅಭಿನಂದಿಸಲಾಯಿತು.
ತಾಲೂಕು ಹವ್ಯಕ ಸಭಾಧ್ಯಕ್ಷ ಎಮ್. ನಾಗರಾಜ ಭಟ್ ಮಕ್ಕಿ ದೇವಸ್ಥಾನ ಅಭಿನಂದಿಸಿ ಮಾತನಾಡಿ ವಿದ್ಯಾರ್ಥಿ ವೆಂಕಟೇಶ್ ಗ್ರಾಮೀಣ ಭಾಗದ ಮದ್ಯಮ ವರ್ಗದ ಕುಟುಂಬದಿಂದ ಬಂದಿರುವವನಾಗಿದ್ದು ಇವನು ಸ್ವಪ್ರಯತ್ನದಿಂದ ಸಾಧನೆ ಮಾಡಿದ್ದಾನೆ. ಇವನ ಸಾಧನೆ ತಾಲೂಕಿಗೆ ಹಾಗೂ ಸಮಾಜಕ್ಕೆ ಹೆಮ್ಮೆತಂದಿರುತ್ತದೆ. ಇವನ ಈ ಸಾಧನೆಗೆ ಹೆತ್ತವರು ಹಾಗೂ ಉಪನ್ಯಾಸಕ ವರ್ಗದವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಬಹಳ ಮುಖ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಹವ್ಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಯು. ಸಂದೇಶ ಭಟ್, ಶ್ರೀ ರಾಮಚಂದ್ರಾಪುರ ಮಠದ ಬಸ್ರೂರು ಭಾಗದ ಗುರಿಕಾರ ರವಿಶಂಕರ ಮಧ್ಯಸ್ಥ, ವಿದ್ಯಾರ್ಥಿ ತಂದೆ ಸುಬ್ರಹ್ಮಣ್ಯ ಪುರಾಣಿಕ್, ತಾಯಿ ಅನ್ನಪೂರ್ಣ, ತಂಗಿ ವೈಷ್ಣವಿ, ದೊಡ್ಡಪ್ಪ ಪ್ರಭಾಕರ ಪುರಾಣಿಕ್ ಹಾಗೂ ಅಜ್ಜ ಅಜ್ಜಿ ಉಪಸ್ಥಿತರಿದ್ದರು.