ಕುಂದಾಪುರ: ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚಿನ ಡೊನೇಷನ್ ವಸೂಲಿ ಮಾಡುವುದು ಅವಿರತವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, ನಿಯಮಗಳ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ವಸೂಲಿಯಲ್ಲಿ ತೊಡಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಆದೇಶಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ದೋರಣೆಯನ್ನು ಅನುಸರಿಸುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ನ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಆರೋಪಿಸಿದರು.
ಅವರು ಖಾಸಗಿ ಕಾಲೇಜುಗಳಲ್ಲಿನ ಡೊನೆಶನ್ ಹಾವಳಿಯನ್ನು ನಿಯಂತ್ರಿಸಲು ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ವನ್ನು ರಚಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೇಡರೇಶನ್ ಕುಂದಾಪುರದ ಮಿನಿ ವಿಧಾನಸೌಧದ ಮುಂದೆ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಡೋನೆಷನ್ ಹಾವಳಿಯನ್ನು ನಿಯಂತ್ರಿಸುವಂತೆ ಕಳೆದ ಕೆಲವು ವರ್ಷಗಳಿಂದ ಎಸ್.ಎಫ್.ಐ ಹೋರಾಟವನ್ನು ಮಾಡುತ್ತಲೇ ಬಂದಿದ್ದೇವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಸೂಕ್ತವಾದ ಸ್ಪಂದನೆ ದೊರೆತಿಲ್ಲ. ಕಳೆದ ಬಾರಿ ತಹಶೀಲ್ದಾರರಿಗೆ ನೀಡಿದ ಮನವಿಗೂ ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದವರು ದೂರಿದರು.
ಡಿ.ವೈ.ಎಪ್.ಐ ಪ್ರಮುಖ ಸುರೇಶ್ ಕಲ್ಲಾಗರ್ ಮಾತನಾಡಿ ಶಿಕ್ಷಣ ಉಳ್ಳವರ ಪಾಲಾಗುತ್ತಿದೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಶಿಕ್ಷಣವನ್ನು ವ್ಯವಹಾರವನ್ನಾಗಿಸಿಕೊಂಡಿದ್ದಾರೆ. ಡೊನೇಷನ್ ಹಾವಳಿಯಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ರಾಜಕಾರಣಿಗಳು ತಮ್ಮ ಸಂಬಂಧಿಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಪರವಾನಿಗೆ ನೀಡುವುದರ ಮೂಲಕ ಲಾಭ ಮಾಡಲು ಹೋರಟಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಿ ಒಂದೇ ಸೂರಿನಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾದ ಶಿಕ್ಷಣ ದೊರೆಯುವಂತಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿನ ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಪ್ರಶ್ನಿಸುವುದಕ್ಕೆ ವಿದ್ಯಾರ್ಥಿ ಚುನಾವಣೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.
ಪೋಷಕರ ಪರವಾಗಿ ಕಾಮ್ರೇಡ್ ಎಚ್. ನರಸಿಂಹ ಮಾತನಾಡಿ ಅತಿಯಾದ ಡೊನೇಷನ್ ನಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಡವರನ್ನು ಸುಲಿಗೆ ಮಾಡಲು ಹೊರಟಿರುವ ಬಂಡವಾಳಶಾಹಿ ಶಿಕ್ಷಣ ಸಂಸ್ಥೆಗಳ ವಿರುದ್ದ ವಿದ್ಯಾರ್ಥಿಗಳು, ಪೊಷಕರು ಹೋರಾಟಬೇಕಿದೆ ಎಂದರು.
ಎಸ್ಎಫ್ಐ ಸಂಘಟನೆಯ ಅಧ್ಯಕ್ಷ ಅಕ್ಷಯ ವಡೇರಹೋಬಳಿ, ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮೊದಲಾದ ವಿದ್ಯಾರ್ಥಿ, ಪೋಷಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕುಂದಾಪುರ ಹೆಡ್ ಕ್ವಾಟರ್ ನ ಡೆಪ್ಯೂಟಿ ಡೈರೆಕ್ಟರ್ ಕೆ. ರಾಮಚಂದ್ರ ರಾವ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.