Kundapra.com ಕುಂದಾಪ್ರ ಡಾಟ್ ಕಾಂ

ಕಲ್ಲಡ್ಕ ಶಾಲೆಗೆ ಕೊಲ್ಲೂರು ಊಟ ನಿಲ್ಲಿಸಿದ ಬಗ್ಗೆ ರಮಾನಾಥ ರೈ ಹೇಳಿಕೆ ಚುನಾವಣಾ ಗಿಮಿಕ್: ಬಿಎಂಎಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಹಣ ಸಂದಾಯವಾಗುತ್ತಿರುವುದನ್ನು ತಡೆಹಿಡಿಯಲು ಕೊಲ್ಲೂರಿನ ಮಾಜಿ ಧರ್ಮದರ್ಶಿ ಬಿ.ಎಂ ಸುಕುಮಾರ ಶೆಟ್ಟಿ ಅವರು ತಿಳಿಸಿದ್ದರಿಂದ ಸರಕಾರದ ಗಮನಕ್ಕೆ ತಂದು ತಡೆಹಿಡಿಯಲಾಗಿತ್ತು ಎಂದು ಸಚಿವ ರಮಾನಾಥ ರೈ ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅವರು ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಗಿಮಿಕ್ ಮಾಡಿದ್ದಾರೆಂದು ಬೈಂದೂರು ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.

ಅವರು ಹೆಮ್ಮಾಡಿಯ ಬಿಜೆಪಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಮಾನಾಥ ರೈ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಲ್ಲೂರು ದೇವಳದ ಟ್ರಸ್ಟಿಯಾದ ಬಳಿಕ ವಿದ್ಯಾರ್ಥಿಗಳಿಗಾಗಿ ದೇವಳದ ಶಾಲೆ ಆರಂಭಿಸಿದ್ದೇನೆ. ಸರಕಾರದಿಂದ ಬಿಸಿಯೂಟ ನೀಡುವ ಮೊದಲೇ ಕೊಲ್ಲೂರು ದೇವಳದಿಂದ ಸ್ಥಳೀಯ ಎಲ್ಲಾ ಶಾಲೆಗಳಿಗೂ ಬಿಸಿಯೂಟ ನೀಡುವ ವ್ಯವಸ್ಥೆ ಮಾಡಿದ್ದೇನೆ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಒಂದು ಮನೆ ಮಾಡಿ ಉಚಿತ ಊಟ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಳದ ಟ್ರಸ್ಟಿಯಾದ ಬಳಿಕ ದೇವಸ್ಥಾನದಿಂದಲೇ ಶಾಲಾ ಕಾಲೇಜು ಆರಂಭಿಸಿ, ಬಿಸಿಯೂಟದ ವ್ಯವಸ್ಥೆಯನ್ನೂ ಆರಂಭಿಸಿದ್ದೇನೆ. ಕಲ್ಲಡ್ಕ ಶಾಲೆಯ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಇದ್ದರು.

 

Exit mobile version