Kundapra.com ಕುಂದಾಪ್ರ ಡಾಟ್ ಕಾಂ

ದೇವರ ಸೇವೆಯ ಮೂಲಕ ಧಾರ್ಮಿಕ ಪ್ರಜ್ಞೆ ಜಾಗೃತಿ: ಬಿ. ಸಿ. ರಾವ್ ಶಿವಪುರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದೇವರು ಎನ್ನುವುದು ಒಂದು ನಂಬಿಕೆಯಾಗಿದ್ದು, ಧರ್ಮ ಜೀವನದ ಒಂದು ಭಾಗವಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಆಡಂಬರ ರಹಿತ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕು ಎಂದು ಹಿರಿಯ ಧಾರ್ಮಿಕ ಧುರೀಣ ಬಿ. ಸಿ. ರಾವ್ ಶಿವಪುರ ಹೇಳಿದರು.

ಕೆರ್ಗಾಲು ಗ್ರಾಪಂ ವ್ಯಾಪ್ತಿಯ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನಲ್ಲಿ ಕ್ಷೇತ್ರದ ನಾಗದೇವರ ಪುನರ್‌ಪ್ರತಿಷ್ಟಾ, ಆಶ್ಲೇಷಾ ಬಲಿ ಹಾಗೂ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ಧರ್ಮದ ಮುಖಗಳು ಬೇರೆಬೇರೆಯಾಗಿದ್ದು, ಸಮಜದಲ್ಲಿ ಇದನ್ನು ವಿಭಿನ್ನ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಎಲ್ಲವೂ ಹೊಂದಿರುವ ನಾವಿಂದು ಇಲ್ಲದೆಡೆಗೆ ಸಾಗುತ್ತಿದ್ದೇವೆ. ಜೀವನದಲ್ಲಿ ಗೊತ್ತುಗುರಿ ಹಾಕಿಕೊಳ್ಳದೇ ನಾವು ಸೋತಿದ್ದೇವೆ. ಧರ್ಮದಿಂದ ಬದಲಾಗಿದ್ದೇವೆ. ನಮ್ಮ ಮೂಲ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ಇದು ನಮ್ಮ ಹಿಂದೂ ಸಮಾಜದ ದೊಡ್ಡ ದುರಂತವಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವಗಳ ಮೂಲಕ ದೈವೀಕಶಕ್ತಿಯ ಧಾರ್ಮಿಕ ಸಂದೇಶ ನೀಡಿ ಧರ್ಮ ಜಾಗೃತಿ ಮಾಡಬೇಕಾಗಿದೆ. ಭಗವಂತನನ್ನು ಪ್ರೀತಿಸುವ ಮನಸುಗಳು ಹೆಚ್ಚಾಗಬೇಕು, ಈ ನೆಲೆಯಲ್ಲಿ ಹೆತ್ತವರು ಮಕ್ಕಳಲ್ಲಿ ಬಾಲ್ಯದಿಂದಲೇ ಧರ್ಮ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ತಿಳಿಸಬೇಕು. ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತಿದ್ದು, ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದಿರುವ ಸಂಸ್ಕಾರವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಅಶೋಕ ಭಟ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು. ದೇವಳದ ನವೀಕೃತ ಪುಷ್ಕರಣಿಯನ್ನು ರೋಟರಿ ಮಾಜಿ ಅಧ್ಯಕ್ಷ ಗೋವಿಂದ ಎಂ. ಉದ್ಘಾಟಿಸಿದರು. ಅನುರಾಧ ಭಾಸ್ಕರ ಮಂಜರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಗರಾಜ ಆರ್. ಸುವರ್ಣ, ಅಧ್ಯಕ್ಷ ದಿನೇಶ ಕೆ. ಗಾಣಿಗ, ಉತ್ಸವ ಸಮಿತಿ ಅಧ್ಯಕ್ಷ ಹೊಸ್ಮನೆ ಸುಬ್ರಹ್ಮಣ್ಯ ದೇವಾಡಿಗ, ಕುಂಚೇಶಿ ಕೃಷ್ಣಗೋಪಾಲ ಹೆಬ್ಬಾರ್ ಉಪಸ್ಥಿತರಿದ್ದರು. ಕೊಬ್ರಿಮನೆ ಸುನಿಲ್‌ಕುಮಾರ್ ಸ್ವಾಗತಿಸಿ, ಮಂಜುನಾಥ ದೇವಾಡಿಗ ನಿರೂಪಿಸಿದರು. ಎಚ್. ರವೀಂದ್ರ ವಂದಿಸಿದರು.

 

Exit mobile version