Kundapra.com ಕುಂದಾಪ್ರ ಡಾಟ್ ಕಾಂ

ನಾನೇನು ಮಾಡಿದ್ದೇನೆಂದು ಕ್ಷೇತ್ರದ ಜನರಿಗೆ ಗೊತ್ತಿದೆ: ಹಾಲಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಕೆಲಸ-ಕಾರ್ಯ ಮಾಡಿದ್ದೇನೆ ಹಾಗೂ ಕಸ್ತೂರಿ ರಂಗನ್‌,ಸಿಆರ್‌ಝಡ್‌, ಡೀಮ್ಡ್ ಫಾರೆಸ್ಟ್‌ ಇನ್ನಿತರ ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡ ಬಗ್ಗೆ ದಾಖಲೆಗಳು ನನ್ನಲ್ಲಿವೆ. ಅಗತ್ಯ ಬಿದ್ದಾಗ ಅದನ್ನು ಬಹಿರಂಗಪಡಿಸುತ್ತೇನೆ. ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಪ್ರಧಾನಿ ಮೋದಿ ಉಡುಪಿ ಭೇಟಿ ಕುರಿತು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ನಗರ ಹಾಗೂ ತಾಲೂಕಿನ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ಸೇರ್ಪಡೆ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಭೇಟಿ ಕೊಟ್ಟ ಹಾಲಾಡಿಯವರು ಮೇ 1ರಂದು ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಕುರಿತು ಚರ್ಚಿಸಿದರು.

ಬಿಜೆಪಿಗೆ ಸೇರ್ಪಡೆ
ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದ ಕುಂದಾಪುರ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷ ಶಿವ ಮೆಂಡನ್‌, ಬುದ್ದರಾಜ ಶೆಟ್ಟಿ ಕೋಟೇಶ್ವರ ಅವರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಕಿರಣ್‌ ಕೊಡ್ಗಿ, ಕುಂದಾಪುರ ಪ್ರಭಾರಿ ಸಂಧ್ಯಾ ರಮೇಶ್‌, ನಾಯಕರಾದ ರಾಘವೇಂದ್ರ, ಹೊರರಾಜ್ಯದ ಪ್ರಮುಖ ಜೇಸ್‌ ಡಯಾಸ್‌, ಮೋಹನ್‌ದಾಸ್‌ ಶೆಣೈ, ಜಾನಕಿ ಬಿಲ್ಲವ, ಭಾಸ್ಕರ ಬಿಲ್ಲವ ಇದ್ದರು. ಕುಂದಾಪುರದ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರ. ಕಾರ್ಯದರ್ಶಿ ಶಂಕರ ಅಂಕದಕಟ್ಟೆ ನಿರೂಪಿಸಿದರು.

 

Exit mobile version