Kundapra.com ಕುಂದಾಪ್ರ ಡಾಟ್ ಕಾಂ

ಗುರುಹಿರಿಯರ ಮಾರ್ಗದರ್ಶನ ಬದುಕಿನ ಸ್ಪೂರ್ತಿ- ವಿದ್ಯಾಧಿರಾಜತೀರ್ಥ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ರುಚಿಯಿಲ್ಲದ ಭೋಜನ, ಶೃತಿ, ಲಯ, ತಾಳವಿಲ್ಲದ ಸಂಗೀತ ನಮ್ಮ ಶರೀರ ಹಾಗೂ ಮನಸ್ಸಿಗೆ ಹೇಗೆ ಅಪಥ್ಯವಾಗುವುದೋ ಹಾಗೆಯೇ ಸಂಸ್ಕಾರವಿಲ್ಲದ ಜೀವನವೂ ಕೂಡಾ. ಮುಖ್ಯವಾಗಿ ಸಂಸ್ಕಾರವೇ ಮನುಷ್ಯನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಗುತ್ತದೆ. ಆ ನೆಲೆಯಲ್ಲಿ ಗುರು-ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಜೀವನದಲ್ಲಿ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ ಸ್ವಾಮೀಜಿ ಹೇಳಿದರು.

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ನಡೆದ ಶತಕಲಾಭಿಷೇಕ ಹಾಗೂ ಲಘುವಿಷ್ಣು ಹವನದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಯಾವುದೇ ಸಮಾಜ ಉದ್ದಾರವಾಗಬೇಕಾದರೆ ಅಲ್ಲಿ ಆಚಾರ-ವಿಚಾರ, ದೇವರು, ಧರ್ಮವಿರಬೇಕು. ಅಗ ಮಾತ್ರ ಸಮಾಜದ ಸಮೃದ್ಧಿಯಾಗಿರಲು ಸಾಧ್ಯ ಎನ್ನುವುದು ತತ್ವಸಿದ್ಧಾಂತ. ಅದರಂತೆ ಲೋಕಕಲ್ಯಾಣಕ್ಕಾಗಿ ದೇವತಾರಾಧನೆ, ಯಜ್ಞ, ಯಗಾದಿಗಳನ್ನು ಮಾಡಲು ಪರಶುರಾಮ ದೇವರು ತ್ರಿಹೋತ್ರದಿಂದ ಸಾರಸ್ವತರನ್ನು ಗೋವಾಕ್ಕೆ ಕರೆತಂದರು ಎಂಬ ಉಲ್ಲೆಖವಿದೆ. ನಾಲ್ಕೂ ಕಡೆಗಳಲ್ಲಿನ ಪರ್ವತಶ್ರೇಣಿಯ ಮಧ್ಯದಲ್ಲಿ ನೆಲೆನಿಂತಂತಹ ಸಾರಸ್ವತರು ಅಷ್ಟ ಅಗ್ರಹಾರ ನಿರ್ಮಿಸಿ ಅಲ್ಲಿನ ಮೂವತ್ತು ಗ್ರಾಮಗಳಲ್ಲಿ ವಾಸವಾಗಿದ್ದರು. ಅಲ್ಲಿಂದ ಧರ್ಮ, ಸಂಸ್ಕೃತಿಯ ಸಂವರ್ಧನೆಗಾಗಿ ಸುಮರು ೪೨ ದೇವಾಲಯಗಳನ್ನು ನಿರ್ಮಿಸಲಾಯಿತು. ಮುಂದೆ ಪರಕೀಯರ ಆಕ್ರಮಣದಿಂದ ಬೇರೆಬೇರೆ ರಾಜ್ಯಗಳಿಗೆ ವಲಸೆಹೋಗಿ ಅಲ್ಲಲ್ಲಿ ನೆಲೆನಿಂತ ಸಾರವಂತ ಸಮಾಜ ತಮ್ಮ ಬುದ್ಧಿಮತ್ತೆಯಿಂದ ಕೃಷಿಭೂಮಿ ವಿಕಾಸದೊಂದಿಗೆ ಜೀವನ ನಡೆಸಲು ಪ್ರಾರಂಭಿಸಿದರು. ಧಾರ್ಮಿಕ ಮನೋಭಾವನೆ, ಭಕ್ತಿಯಿಂದ ಜೀವನದಲ್ಲಿ ಸುಖ-ಶಾಂತಿ ಪಡೆದವರು ಎನ್ನುವ ವಿಚಾರ ಸಾರಸ್ವತ ಪರಂಪರೆ ಇತಿಹಾಸ ಮತ್ತು ಪುರಾಣಗಳಲ್ಲಿಯೂ ಸಿಗುತ್ತದೆ ಎಂದ ಸಾರಸ್ವತ ಸಮಾಜದ ಇತಿಹಾಸವನ್ನು ಎಳೆಎಳೆಯಾಗಿ ತೆರೆದಿಟ್ಟರು.

ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಕಿರಿಯ ಮಠಾಧೀಶ ಶ್ರೀ ವಿದ್ಯಾಧೀಶ ತೀಥ ಶ್ರೀಪಾದವಡೇರ ಸ್ವಾಮಿಜಿ ಮಾತನಾಡಿ, ಜೀವನದಲ್ಲಿ ದೇವರ ಉಪಾಸನೆಯನ್ನು ನಿತ್ಯ ನಿರಂತರ ಮಾಡಬೇಕು. ಉಪಾಸನೆಗೆ ಪ್ರಾಧಾನ್ಯತೆ ನೀಡಬೇಕು. ಅನನ್ಯ ಭಾವನೆಯಿಂದ ದೇವರ ಸೇವೆ ಮಾಡಿದರೆ ದೇವರು ನಮ್ಮ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಪ್ರತಿಯೊಂದು ಮನೆಗಳಲ್ಲಿ ದೇವರ ಭಜನೆ, ನಾಮಸ್ಮರಣೆ ಮೊದಲಾದ ಧಾರ್ಮಿಕ ಚಟುವಟಿಕೆಗಳು ನಡೆದಾಗ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಶ್ರೀದೇವರ ಮತ್ತು ಗುರುಗಳ ಸೇವೆ ಮಾಡುವುದರಿಂದ ನಮ್ಮ ಜೀವನ ಪಾವನವಾಗುತ್ತದೆ ಎಂದು ಅವರು ಆಶೀರ್ವದಿಸಿದರು.

ಶ್ರೀವೆಂಕಟರಮಣ ಸೇವಾಸಮಿತಿ ಅಧ್ಯಕ್ಷ ದಾಮೋದರ ಪ್ರಭು, ಊರಿನ ಹತ್ತ ಸಮಸ್ತರ ಪರವಾಗಿ ಗುರುಗಳಿಗೆ ಪಾದ್ಯಪೂಜೆ ಸಲ್ಲಿಸಿದರು. ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸನ್ಮಾನಿಸಿ ಹರಸಿದರು. ರಾಘವೇಂದ್ರ ಪ್ರಭು ಪ್ರಾಸ್ತಾವಿಸಿ, ಸಮಿತಿಯ ಕಾರ್ಯದರ್ಶಿ ಎನ್. ರಮೇಶ ಪೈ ನಿರೂಪಿಸಿದರು.

 

Exit mobile version