Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ದೇವಾಡಿಗರ ಒಕ್ಕೂಟದ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರು ದೇವಾಡಿಗರ ಒಕ್ಕೂಟದ ವಾರ್ಷಿಕ ಮಹಾಸಭೆ ಒತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಡೆಯಿತು.

ಸಮಾರಂಭವನ್ನು ಉದ್ದೇಶಿಸಿ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿ ಸಮುದಾಯದ ಸಂಘಟನೆಯಿಂದ ನನಗೇನು ಸಿಕ್ಕಿದೆ ಅಥವಾ ಯಾವ ಪ್ರಯೋಜನ ದೊರಕಿದೆ ಎಂಬ ಸ್ವಾರ್ಥಕ್ಕಿಂತ ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ, ನನ್ನ ಕರ್ತವ್ಯವೇನು ಎಂದು ಪ್ರತಿಯೊಬ್ಬರೂ ಚಿಂತಿಸಿದಾಗ ಮಾತ್ರ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ನಿರ್ಮಾಣವಾಗಬೇಕು ಎಂಬ ನೆಲೆಯಲ್ಲಿ ಪ್ರತಿಯೊಂದು ಸಮುದಾಯದವರ ಸಂಘಟನೆಗಳು ಪ್ರಯತ್ನಿಸಬೇಕು. ಸಾಧಕರನ್ನು ಗುರುತಿಸಿ ಗೌರವಿಸುದರೊಂದಿಗೆ ಶೈಕ್ಷಣಿಕವಾಗಿ ಹಿಂದುಳಿದ ಬಡ ಮಕ್ಕಳಿಗೂ ಸಂಘಟನೆ ನೆರವಾಗಬೇಕು. ಉತ್ತಮ ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸುವ ಮೂಲಕ ಭವಿಷ್ಯದಲ್ಲಿ ಹುಟ್ಟೂರಿಗೂ, ಸಮುದಾಯಕ್ಕೂ, ಹೆತ್ತವರಿಗೂ ಹಾಗೂ ದೇಶಕ್ಕೂ ಅವರು ಕೀರ್ತಿತರುವಂತಾಗಬೇಕು ಎಂದರು.

ಒಕ್ಕೂಟದ ಅಧ್ಯಕ್ಷ ಹೊಸಾಡು ನಾರಾಯಣ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಸಮಾಜದ ಪ್ರಗತಿಪರ ಕೃಷಿಕ ಕೊರಾಡಿ ರಾಮ ದೇವಾಡಿಗ ಹಾಗೂ ಸ್ವರವಾದಕ ಮೌರ್ಕಾರ್‌ಮನೆ ನಾಗರಾಜ ದೇವಾಡಿಗರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಒಕ್ಕೂಟದ ಗೌರವಾಧ್ಯಕ್ಷ ಕೆ. ಜಿ. ಸುಬ್ಬ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ದೇವಾಡಿಗ, ಬೆಂಗಳೂರು ದೇವಾಡಿಗ ನವೋದಯ ಸಂಘದ ಉಪಾಧ್ಯಕ್ಷ ಬಿ. ಆರ್. ದೇವಾಡಿಗ, ಭಟ್ಕಳ ದೇವಾಡಿಗರ ಸಂಘದ ಗೌರವಾಧ್ಯಕ್ಷ ಗಣಪತಿ ದುರ್ಗಯ್ಯ ದೇವಾಡಿಗ ಬೆಳ್ಳಿ, ಕೊಲ್ಲೂರು ಡಾಟ್ ಕಾಂ ಸಂಯೋಜಕಿ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.

ಒಕ್ಕೂಟ ಸ್ಥಾಪಕಾಧ್ಯಕ್ಷ ನಾರಾಯಣ ದೇವಾಡಿಗ ಪ್ರಾಸ್ತಾವಿಸಿ, ಕಾರ್ಯದರ್ಶಿ ಸತ್ಯಪ್ರಸನ್ನ ವರದಿ ವಾಚಿಸಿದರು. ಕಳವಾಡಿ ರಾಘವೇಂದ್ರ ದೇವಾಡಿಗ ಸ್ವಾಗತಿಸಿ, ಹೊಸಾಡು ಮಾಲತಿ ದೇವಾಡಿಗ ವಂದಿಸಿದರು. ಜನಾರ್ದನ ದೇವಾಡಿಗ ನಿರೂಪಿಸಿದರು. ಬೆಳಿಗ್ಗೆ ದೇವಳದಲ್ಲಿ ಸಮಾಜ ಬಾಂಧವರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.

 

Exit mobile version