Site icon Kundapra.com ಕುಂದಾಪ್ರ ಡಾಟ್ ಕಾಂ

ಹೇರೂರಿನಲ್ಲಿ ಸಿಡಿಲಿನಿಂದ ಮನೆಗಳಿಗೆ ಹಾನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಂಗಳವಾರ ರಾತ್ರಿ ಹೇರೂರು ಗ್ರಾಮದಲ್ಲಿ ಸಿಡಿಲಿನಿಂದ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಿನ ಚಿಕ್ತಾಡಿಯ ಉಳ್ಳೋಳಿಮನೆ ನಾಗಿ ಅವರ ಮನೆಗೆ ನಡುರಾತ್ರಿ ವೇಳೆ ಬಡಿದ ಸಿಡಿಲಿನಿಂದ ಮನೆ ಜಖಂಗೊಮಡುದಲ್ಲದೆ, ಒಂದು ಭಾಗಕ್ಕೆ ಬೆಂಕಿ ತಗಲಿತು. ಎಚ್ಚತ್ತ ನೆರೆಮನೆಯ ಮಹೇಶ ಮತ್ತಿತರರು ತಮ್ಮ ಮನೆಯ ಪಂಪ್‌ನಿಂದ ನೀರು ಹಾಯಿಸಿ ಬೆಂಕಿ ನಂದಿಸಿದರು. ನಾಗಿ ಇದರ ಅರಿವು ಇಲ್ಲದೆ ನಿದ್ರಿಸಿದ್ದರು. ನೆರೆಹೊರೆಯವರ ಪ್ರಯತ್ನವಿಲ್ಲದೆ ಹೋಗಿದ್ದರೆ ಮನೆ ಪೂರ್ಣ ಸುಟ್ಟುಹೋಗುವುದರೊಂದಿಗೆ ಜೀವ ಹಾನಿ ಸಂಭವಿಸುತ್ತಿತ್ತು. ಮನೆ ಜಖಂಗೊಂಡಿರುವುದರಿಂದ ಅದರಲ್ಲಿ ವಾಸಿಸುವುದು ಅಸಾಧ್ಯ ಎನ್ನಲಾಗಿದೆ.

ಸನಿಹದ ಸಾಟಿಮನೆ ಸಾಕು ಪೂಜಾರಿ ಅವರ ಮನೆಗೂ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ಜೋಡಣೆ, ಮೋಟರ್ ಸೇರಿದಂತೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಅವರಿಗೆ ಇದರಿಂದ ರೂ ೧ ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಎರಡೂ ಮನೆಗಳಿಗೆ ಕಂದಾಯ ನಿರೀಕ್ಷಕ ಅಣ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಕುಮಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ, ಸತೀಶ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಗಿರಿಜಾ ವೀರಶೇಖರ ಭೇಟಿನೀಡಿ ಪರಿಶೀಲಿಸಿದ್ದಾರೆ.

Exit mobile version