Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪಕ್ಕೆ ಶಾಶ್ವತ ಪರಿಹಾರ : ಡಾ. ಎಸ್. ಎನ್. ಪಡಿಯಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕುಂದಾಪುರ ಸೇವಾಸಂಗಮ ಟ್ರಸ್ಟ್ ಆಶ್ರಯದಲ್ಲಿ ಮರವಂತೆ ಕಡಲ ಕಿನಾರೆ ಸಮೀಪದ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಾರ್ಯಕ್ರಮ ಜರುಗಿತು.

2004ರ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಅಭಿಯಾನದ ರೂವಾರಿ, ಕುಂದಾಪುರ ಸೇವಾಸಂಗಮ ಟ್ರಸ್ಟ್ ಸಂಸ್ಥಾಪಕರಾದ ಡಾ. ಎಸ್.ಎನ್. ಪಡಿಯಾರ್ ಮಾತನಾಡಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಉತ್ಪನ್ನವಾಗುವ ಧ್ವನಿ ತರಂಗಗಳಿಗೆ ವಿಶೇಷ ಶಕ್ತಿಯಿದ್ದು, ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪವನ್ನು ತಡೆದು ಶಾಶ್ವತ ಪರಿಹಾರ ನೀಡಬಲ್ಲದು. ಈ ನಿಟ್ಟಿನಲ್ಲಿ 2004 ರಲ್ಲಿ ಸೇವಾಸಂಗಮ ಪಶ್ಚಿಮ ಕರಾವಳಿಯಾದ್ಯಂತ ಸ್ತೋತ್ರ ಪಠಣ ಅಭಿಯಾನವನ್ನು ಸಂಘಟಿಸಿ ಯಶಸ್ಸು ಕಂಡಿದೆ ಆದುದರಿಂದ ಕರಾವಳಿ ತೀರದ ಪ್ರತಿಯೊರ್ವರು ಸ್ತೋತ್ರ ಪಠಣದಲ್ಲಿ ಭಾಗಿಯಾಗಬೇಕಿದೆ ಎಂದು ಹೇಳಿದರು.

2004ರಲ್ಲಿ ಕರಾವಳಿಯ 6 ಸಾವಿರ ಮನೆಗಳಲ್ಲಿ ಸ್ತೋತ್ರ ಪಠಣ ಮಾಡಿದ್ದು, ಬಳಿಕ ಕರಾವಳಿಯಲ್ಲಿ ಕಡಲ್ಕೋರೆತದ ಭೀತಿ ಕ್ಷೀಣಿಸಿ ತೀರವಾಸಿಗಳಲ್ಲಿ ಆತಂಕ ದೂರವಾಗಿರುವುದನ್ನು ಕಂಡುಕೊಳ್ಳಲಾಗಿದೆ ಅಲ್ಲದೇ ಅಭಿಯಾನದಲ್ಲಿ ಪಾಲ್ಗೊಂಡವರು ಅನೇಕ ಮಂದಿ ವೈಯಕ್ತಿಕವಾಗಿಯೂ ಹಲವಾರು ಲಾಭ ಕಂಡುಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಿದ್ದಾರೆ ಇದೀಗ ಮತ್ತೊಮ್ಮೆ ಕರಾವಳಿಯಾದ್ಯಂತ ನಿರಂತರವಾಗಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ನಡೆಯಬೇಕಿದ್ದು ತನ್ಮೂಲಕ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪ ತಡೆಯಲು ಪ್ರತಿಯೊಬ್ಬರು ಕೈಜೋಡಿಸ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ರಾಮಕೃಷ್ಣ ಶೇರೆಗಾರ್, ಸುರೇಶ್ ಪೈ, ಸೇವಾಸಂಗಮ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಿಕಾ ಧನ್ಯ, ಟ್ರಸ್ಟಿಗಳಾದ ಕಲ್ಪನಾ ಭಾಸ್ಕರ್, ಚಂದ್ರಶೇಖರ್ ಪಡಿಯಾರ್ , ರಶ್ಮೀರಾಜ್ ಮೊದಲಾದವರು ಉಪಸ್ಥಿತರಿದ್ದರು.

 

Exit mobile version