Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘ ಗಂಗೊಳ್ಳಿ ಬಂದರು ಒಕ್ಕೂಟದ ಮಹಾಸಭೆ

?

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಗಂಗೊಳ್ಳಿ ಬಂದರು ಒಕ್ಕೂಟದ ಮಹಾಸಭೆ ಜರುಗಿತು.

ಈ ಮಹಾಸಭೆಯನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ಯೋಜನಾಧಿಕಾರಿ ಶಶಿರೇಖಾ ಪಿ. ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ಸದುದ್ದೇಶದಿಂದ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ವಿಸ್ತರಿಸಿದೆ. ಯೋಜನೆಯ ಮೂಲಕ ಸ್ವಸಹಾಯ ಸಂಘದ ಸದಸ್ಯರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸದಸ್ಯರ ಜೀವನದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಜನಜಾಗೃತಿ ವೇದಿಕೆ ತ್ರಾಸಿ ವಲಯದ ಮಾಜಿ ಅಧ್ಯಕ್ಷ ಬಿ.ರಾಘವೇಂದ್ರ ಪೈ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕ ಕುಟುಂಬಗಳು ಬೆಳಕನ್ನು ಕಾಣುವಂತಾಗಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಿದ್ದಾರೆ. ಸ್ವಸಹಾಯ ಸಂಘದ ಸದಸ್ಯರು ಪ್ಲಾಸ್ಟಿಕ್ ವಿರುದ್ಧ ಆಂದೋಲನ ರೂಪಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತ ತೊಂದರೆಗಳನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಸ್ವಸಹಾಯ ಸಂಘಗಳ ಗಂಗೊಳ್ಳಿ ಬಂದರು ಒಕ್ಕೂಟದ ಅಧ್ಯಕ್ಷೆ ಸುಜಾತಾ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ಕೃಷ್ಣ ಪೂಜಾರಿ ಶುಭ ಹಾರೈಸಿದರು. ಬಂದರು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಒಕ್ಕೂಟದ ಉಪಾಧ್ಯಕ್ಷ ಮಹೇಶ ಶೇಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರತ್ನಿ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ನಾಗರತ್ನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Exit mobile version