Kundapra.com ಕುಂದಾಪ್ರ ಡಾಟ್ ಕಾಂ

ಚಿಕ್ಕ ವಯಸ್ಸಿನಲ್ಲೇ ಯೋಗವನ್ನು ಕಲಿತು ದಿನವೂ ಅನುಸರಿಸುವುದರಿಂದ ದೇಹ, ಮನಸ್ಸುಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು- ಎಸ್. ಜನಾರ್ದನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿಶ್ವ ಯೋಗ ದಿನದ ಅಂಗವಾಗಿ ಮರವಂತೆ ಗ್ರಾಮ ಪಂಚಾಯತ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಆಶ್ರಯದಲ್ಲಿ  ಸಾಧನಾ ಸಮುದಾಯ ಭವನದಲ್ಲಿ 7 ದಿನಗಳ ಯೋಗ ಶಿಬಿರವನ್ನು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಭಾರತದ ಪುರಾತನ ಜ್ಞಾನವಾದ ಯೋಗ ಈಗ ವಿಶ್ವವ್ಯಾಪಿಯಾಗಿದೆ. ಅದರ ಮಹತ್ವ ಮತ್ತು ಅದನ್ನು ಅನುಸರಿಸುವುದರಿಂದ ಆಗುವ ಲಾಭವನ್ನು ಎಲ್ಲರೂ ಅರಿತಿದ್ದಾರೆ. ಇದೇ 21 ರಂದು ಆಚರಿಸಲಾಗುವ ’ವಿಶ್ವ ಯೋಗ ದಿನ’ ಯೋಗಕ್ಕೆ ದೊರೆತ ವಿಶ್ವ ಮಾನ್ಯತೆಯ ದ್ಯೋತಕ. ಯೋಗವನ್ನು ಎಳವೆಯಲ್ಲೇ ಕಲಿತು ದಿನವೂ ಅನುಸರಿಸುವುದರಿಂದ ದೇಹ, ಮನಸ್ಸುಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ ಅಧ್ಯಕ್ಷತೆ ವಹಿಸಿದ್ದರು. ಅವರು ಮತ್ತು ಅತಿಥಿಗಳಾಗಿದ್ದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಮಹೇಶ್ವರಿ, ಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮರವಂತೆ ಕುಶ ಬಿಲ್ಲವ ಯೋಗದ ಮಹತ್ವದ ಕುರಿತು ಮಾತನಾಡಿದರು.

ಪ್ರೌಢಶಾಲೆಯ ಹಿಂದಿ ಶಿಕ್ಷಕಿ, ಯೋಗಪಟು ಡಾ. ಯಶೋಧಾ ಕರನಿಂಗ ಸ್ವಾಗತಿಸಿ, ವಂದಿಸಿದರು. ಸಾಧನಾ ಸದಸ್ಯ ದೇವಿದಾಸ ಶ್ಯಾನುಭಾಗ್, ಶಿಕ್ಷಕರಾದ ಸಾವಿತ್ರಿ, ಸುಂದರ ಶೆಟ್ಟಿ ಉಪಸ್ಥಿತರಿದ್ದರು. ಎರಡೂ ಶಾಲೆಗಳ 50ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

 

Exit mobile version