Kundapra.com ಕುಂದಾಪ್ರ ಡಾಟ್ ಕಾಂ

ಕಾಡುತ್ತಿರುವ ಮರಳು ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಅಗತ್ಯ: ಕೆ. ಪ್ರತಾಪ್‌ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ಇಲ್ಲಿನ ಆರ್‌ಎನ್‌ ಶೆಟ್ಟಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆ ಜರುಗಿತು.

ಈ ಸಭೆಯನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿರವರು ಮಾತನಾಡಿ ಜಿಲ್ಲೆಯಲ್ಲಿ ಮರಳು ತೆಗೆಯ ಬಾರದು ಎಂದು ನಿರ್ಬಂಧ ವಿಧಿಸುವ ಅಧಿಕಾರಿಗಳು ಜಿಲ್ಲೆಯ ಜನರಿಗೆ ಅಗತ್ಯವಾಗಿರುವ ಮರಳನ್ನು ಒದಗಿಸಬೇಕು ಎನ್ನುವ ಬದ್ದತೆಯನ್ನು ಪ್ರದರ್ಶಿಸಬೇಕು. ಜಿಲ್ಲೆಯ ಜನ ಸಾಮಾನ್ಯರ ಪರ ರೈತ ಸಂಘದ ಧ್ವನಿ ಇರುತ್ತದೆ ಹೊರತು ಇನ್ನಾರದ್ದೋ ಹಿತಾಸಕ್ತಿಯನ್ನು ಕಾಯುವ ಅನಿವಾರ್ಯತೆ ನಮಗಿಲ್ಲ ಎಂದು ಹೇಳಿದರು.

ಕಪ್ಪು ಹಣದಿಂದ ಮನೆ ಹಾಗೂ ಕಟ್ಟಡ ನಿರ್ಮಿಸುವವರಿಗೆ ಮರಳು ಸಮಸ್ಯೆ ಬಾಧಿಸುವುದಿಲ್ಲ. ಕಷ್ಟದಿಂದ ದುಡಿಮೆ ಮಾಡಿ ಜೀವನದಲ್ಲಿ ಮೊದಲ ಬಾರಿ ಸ್ವಂತ ಮನೆ ಮಾಡುವವರನ್ನು ಹಾಗೂ ಸರ್ಕಾರದ ಯೋಜನೆಯ ಸಹಕಾರದಿಂದ ಮನೆ ಕಟ್ಟಿಕೊಳ್ಳುವವರನ್ನು ಇಲ್ಲಿನ ಮರಳು ಸಮಸ್ಯೆ ಕಣ್ಣೀರು ತರುಸುತ್ತಿದೆ ಎನ್ನುವ ಸತ್ಯ ಅಧಿಕಾರಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ. ಹೊರ ಜಿಲ್ಲೆಗಳಿಗೆ ಮರಳು ಸಾಗಾಟಕ್ಕೆ ನಿರ್ಬಂಧ ಇದ್ದರೂ, ಇಲ್ಲಿನ ಕೆಲವು ವ್ಯವಸ್ಥೆಗಳಿಂದಾಗಿ ಇಲ್ಲಿನ ಮರಳುಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಜಿಲ್ಲೆಯ ಗಡಿ ದಾಟುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ವರಾಹಿ ನದಿ ತಟಗಳಲ್ಲಿ ದಿಬ್ಬಗಳು ಕಣ್ಣಿಗೆ ಕಾಣೋದಿಲ್ಲ ಎನ್ನುವ ಒಂದೆ ಕಾರಣಕ್ಕಾಗಿ ಸಿಹಿ ನೀರಿನ ಮರಳುಗಾರಿಕೆಗೂ ತಡೆಯುಂಟಾಗಿದೆ. ಅಧಿಕಾರಿಗಳ ತಪ್ಪು ಅಭಿಪ್ರಾಯಗಳಿಂದಾಗಿ ವರಾಹಿ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಕ್ಕೆ ಇದೀಗ ಮರಳುಗಾರಿಕೆಯೂ ಬಲಿಯಾಗುತ್ತಿರುವುದು ನಮ್ಮ ವ್ಯವಸ್ಥೆಯ ದುರಂತ ಎಂದು ಖಾರವಾಗಿ ಹೇಳಿದರು.

ಜಿಲ್ಲೆಯ ಜನರನ್ನು ಬಿಡದಂತೆ ಕಾಡುತ್ತಿರುವ ಮರಳು ಸಮಸ್ಯೆಗೆ ಒಂದು ಶಾಶ್ವತವಾದ ಪರಿಹಾರ ಬೇಕು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಬ್ಬಗೆಯ ನೀತಿಯಿಂದ ಸಮಸ್ಯೆ ಪರಿಹಾರವಾಗೋದಿಲ್ಲ. ಕಾಣದ ವ್ಯಕ್ತಿಗಳ ಹಿತಾಸಕ್ತಿ ಕಾಯುವ ಅನೀವಾರ್ಯತೆಯನ್ನು ಬಿಟ್ಟು ತೀರ್ಮಾನ ಕೈಗೊಳ್ಳಬೇಕು. ಮನೆಯ ಎದುರೇ ಮರಳು ದೊರಕುತ್ತಿದ್ದರೂ, ವಿದೇಶದಿಂದ ಬಂದ ಮರಳು ಚೀಲಗಳನ್ನು ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡಬೇಕಾದ ಸ್ಥಿತಿ ನಮಗೆ ನಾಚೀಕೆಯನ್ನು ಉಂಟು ಮಾಡುತ್ತಿದೆ. ಈ ಸಮಸ್ಯೆಯ ಪರಿಕಾರಕ್ಕೆ ಪಕ್ಷಬೇಧ ಮರೆತು ಎಲ್ಲ ಸ್ತರದ ಜನಪ್ರತಿನಿಧಿಗಳು ಸಂಘಟಿತ ಪ್ರಯತ್ನ ಮಾಡಬೇಕು. ಈ ಪ್ರಯತ್ನದಲ್ಲಿ ಯಶಸ್ಸು ಕಾಣದೆ ಇದ್ದರೆ ಸಮಾನ ಮನಸ್ಕರೊಡಗೂಡಿ ಸಮಸ್ಯೆಯ ಪರಿಕಾರಕ್ಕಾಗಿ ಜಿಲ್ಲಾ ರೈತ ಸಂಘ ಗ್ರಾಮ ಮಟ್ಟದಲ್ಲಿ ಹೋರಾಟ ಸಂಘಟಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ವಿದ್ಯುತ್‌ ಕಣ್ಣು ಮುಚ್ಚಾಲೆಗೆ ಕಡಿವಾಣ ಹಾಕಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗ್ರಾಮೀಣ ಭಾಗದಲ್ಲಿ ನಿಲ್ಲಿಸಲಾಗಿರುವ ಬಸ್ಸುಗಳ ಸಂಚಾರಕ್ಕೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. ರೈತರಿಗಾಗಿ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಗ್ರಾಮೀಣ ಭಾಗದಲ್ಲಿನ ರೈತರಿಗೆ ತಲುಪಲು ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಸರ್ಕಾರ ಹೇಳಿರುವಂತೆ ಅರ್ಜಿ 50 ರ ಅಡಿಯಲ್ಲಿ ಅಕ್ರಮ–ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಕುಮ್ಕಿ ಭೂಮಿ ಇತ್ಯರ್ಥಕ್ಕೆ ಇರುವ ಕಾನೂನು ತೊಡಕುಗಳ ನಿವಾರಣೆಗೆ ಸರ್ಕಾರ ಮುಂದಾಗಬೇಕು. ಪಹಣೆ ಪತ್ರದ ಹಿಂಭಾಗದಲ್ಲಿ ಭೂಮಿಯ ನಕ್ಷೆಯನ್ನು ಮುದ್ರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ವಿಚಾರಗಳ ಬಗ್ಗೆ ಮಾತನಾಡಿದ ಅವರು ಈ ಎಲ್ಲ ವಿಚಾರಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಹಾಗೂ ಸರ್ಕಾರದ ಪ್ರಮುಖರಿಗೆ ರೈತ ಸಂಘದ ಮೂಲಕ ಮನವಿ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪದ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ. ಉಡುಪಿಗೆ ಕುಡಿಯುವ ನೀರಿಗಾಗಿ ವಾರಾಹಿ ನದಿಯಿಂದ ನೀರು ಕೊಂಡೊಯ್ಯುವುದು. ರೈತರ ಸಾಲ ಮನ್ನಾ. ಕೃಷಿ ಇಲಾಖೆಯ ಸವಲತ್ತುಗಳ ಸಮಗ್ರ ಬಳಕೆ. ಮಕ್ಕಳ ಬಸ್‌ ಪಾಸುಗಳ ರದ್ದತೆ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಪ್ರಕಾಶ್ಚಂದ್ರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹದ್ದೂರು ರಾಜೀವ್‌ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಾನಂದ ಶೆಟ್ಟಿ ಬಸ್ರೂರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ ಕೊಳ್ಕೆರೆ, ತಾಲ್ಲೂಕು ಟಿಎಪಿಸಿಎಂಎಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಬಿದ್ಕಲ್‌ಕಟ್ಟೆ, ನ್ಯಾಯವಾದಿ ಕೃಷ್ಣರಾಜ ಶೆಟ್ಟಿ, ರೈತ ಸಂಘದ ಪ್ರಮುಖರಾದ ಸತೀಶ್‌ ಕಿಣಿ ಬೆಳ್ವೆ, ರಾಜೇಶ್‌ ಕೆ.ಸಿ ಕುಂದಾಪುರ, ಸಂತೋಷ್‌ ಶೆಟ್ಟಿ ಬಲಾಡಿ, ಕೃಷ್ಣದೇವ ಕಾರಂತ್‌ ಕೋಣಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಸೀತಾರಾಮ ಗಾಣಿಗ, ಉದಯ್‌ಕುಮಾರ ಶೆಟ್ಟಿ ವಂಡ್ಸೆ, ರಾಜೂ ಶೆಟ್ಟಿ ಶಾಡಿಗುಂಡಿ, ಕಿಶೋರ ಶೆಟ್ಟಿ ಮೈರಕೊಮೆ, ಚೇತನ್‌ ರೈ ದಾಸರಬೆಟ್ಟು, ಚೋರಾಡಿ ಅಶೋಕಕುಮಾರ ಶೆಟ್ಟಿ, ಮನೋಹರ ಶೆಟ್ಟಿ ಅಂಪಾರು, ಶೇಖರ ಶೆಟ್ಟಿ ಯಡ್ತಾಡಿ ಮುಂತಾದವರಿದ್ದರು.

 

Exit mobile version