ಕುಂದಾಪ್ರ ಡಾಟ್ ಕಾಂ ಸುದ್ದಿ
ತೆಕ್ಕಟ್ಟೆ: ಬೇಳೂರು ಸ್ಫೂರ್ತಿಧಾಮದ ಮೇಲೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ, ವೃದ್ಧರನ್ನು ಸ್ಥಳಾಂತರಿಸುವಂತೆ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಎರಡು ಬಾರಿ ವೃದ್ದರನ್ನು ಸ್ಥಳಾಂತರಿಸಲು ಅಧಿಕಾರಿ ಬಂದರೂ ಇಲ್ಲಿ ಆಶ್ರಯಿಸಿರುವ ವೃದ್ಧರು ಹೊರಹೋಗಲು ಕೇಳಲಿಲ್ಲ. ನನ್ನ ಮೇಲಿನ ಅಪವಾದಗಳಿಗೆ ಏನೂ ತಪ್ಪು ಮಾಡದ ವೃದ್ಧರನ್ನು ಬಲಾತ್ಕಾರವಾಗಿ ಸ್ಥಳಾಂತರಿಸುವ ಪ್ರಯತ್ನ ಬೇಡ, ಬದಲಿಗೆ ನನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬರುತ್ತೇನೆ ಎಂದು ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕ ಡಾ|ಕೇಶವ ಕೋಟೇಶ್ವರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಂಸ್ಥೆಯ ಮುಖ್ಯಸ್ಥನಾಗಿ ನನ್ನ ಮೇಲಿನ ಅಪವಾದಗಳಿಗೆ ಉತ್ತರಿಸುವ ಪ್ರಯತ್ನ ಮಾಡಿ ಸೋತಿದ್ದೇನೆ. ಮುಂದಿನ ದಿನದಲ್ಲಿ ಸ್ಫೂರ್ತಿ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ಕರೆದು ರಾಜೀನಾಮೆ ಸಲ್ಲಿಸಿ ಹೊರಬರುತ್ತೇನೆ. ಸಂಸ್ಥೆಯನ್ನು ಮುನ್ನಡೆಸುವ ಆಸಕ್ತಿ ಹೊಂದಿರುವ ಪ್ರಮೀಳಾ ಜೆ.ವಾಜ್ ಅವರಿಗೆ ಈ ವ್ಯವಸ್ಥೆಯ ಸಂಪೂರ್ಣ ಉಸ್ತುವಾರಿ ನೀಡಲು ಆಡಳಿತ ಮಂಡಳಿಗೆ ಶಿಫಾರಸು ಮಾಡುತ್ತೇನೆ. ಸಾರ್ವಜನಿಕ ದೇಣಿಗೆಯಿಂದ ನಿರ್ಮಿತವಾದ ಈ ಇಡೀ ವ್ಯವಸ್ಥೆ ಮುಂದೆಯೂ ಸಾರ್ವಜನಿಕ ಸೇವೆಗೆ ಮೀಸಲಿರಿಸಬೇಕು ಎನ್ನುವುದೇ ನನ್ನ ಆಶಯ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.