Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ವಿಶೇಷ ಚೇತನಾ ಮಕ್ಕಳಿಗೆ ಸಾಧನ-ಸಲಕರಣೆಗಳ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರಿನ ಸಮನ್ವಯಾಧಿಕಾರಿ ಕಚೇರಿಯಲ್ಲಿ ವಲಯದ ವಿಶೇಷ ಮಕ್ಕಳಿಗೆ ಸರ್ಕಾರದಿಂದ ಪೂರೈಕೆಯಾದ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಮಾತನಾಡಿ ಅಂಗವಿಕಲತೆ ಶಾಪವಲ್ಲ. ಇವರಲ್ಲಿಯೂ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿದ್ದಾರೆ. ಅಂತವರನ್ನು ಸ್ಪೂರ್ತಿಯಾಗಿಟ್ಟುಕೊಂಡು ದೈಹಿಕ ಸಾಮರ್ಥ್ಯ ಕೊರತೆಯಿಂದ ಬಳಲುವ ವಿಶೇಷ ಮಕ್ಕಳಿಗೆ ಹೆತ್ತವರು ಮನಸಿಕವಾಗಿ ಸಧೃಡರಾಗಲು ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.

ತಾಪಂ ಸದಸ್ಯೆ ಮಾಲಿನಿ ಕೆ. ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಸದಸ್ಯೆ ಸುಜಾತಾ ದೇವಾಡಿಗ, ಕ್ಷೇತ್ರ ಸಂಪನ್ನೂಲ ವ್ಯಕ್ತಿ ಕರುಣಾಕರ ಶೆಟ್ಟಿ, ಸ್ಕಂದ ಸಂಸ್ಥೆಯ ಅಧಿಕಾರಿಗಳಾದ ಶಿವರಾಜ್ ಉಪಸ್ಥಿತರಿದ್ದರು.

ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾದ ಕುಪ್ಪಯ್ಯ ಮರಾಠಿ ಸ್ವಾಗತಿಸಿ, ನಿರೂಪಿಸಿದರು. ನಾಗರತ್ನ ವಂದಿಸಿದರು. ಈ ಸಂದರ್ಭ ೬೫ ವಿಶೇಷ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ನೀಡಲಾಯಿತು.

ವಿಕಲಚೇತನ ಮಕ್ಕಳಿಗೆ ಯಾರೂ ಅನುಕಂಪ ತೋರಿಸದೇ, ಧೈರ್ಯದಿಂದ ಬದುಕುವಂತೆ ಸ್ಪೂರ್ತಿ ಹೆಚ್ಚಿಸುವ ಮೂಲಕ ಹೆತ್ತವರು ಪ್ರೇರಿಸಬೇಕು. ಅವರು ಶಾರೀರಿಕವಾಗಿ ಸಧೃಡರಾಗುವಲ್ಲಿ ಪ್ರಯತ್ನಿಸಿ, ಇಂತಹ ಮಕ್ಕಳ ಸೇವೆ ದೇವರ ಪೂಜೆಯಂತೆ ಭಾವಿಸಿ. ತಾತ್ಸಾರ, ಭೇಧಭಾವ ಸರ್ವತಾ ಸಲ್ಲದು.– ಮಾಲಿನಿ ಕೆ. ತಾಪಂ ಸದಸ್ಯರು.

 

Exit mobile version