Kundapra.com ಕುಂದಾಪ್ರ ಡಾಟ್ ಕಾಂ

ಮಡಾಮಕ್ಕಿಯ ಹಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ನಕ್ಸಲ್‌ ಪೀಡಿತ ಪ್ರದೇಶವಾದ ಮಡಾಮಕ್ಕಿ ಗ್ರಾಮದ ಹಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಖಾಯಂ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ಪ್ರಸ್ತುತ ಶಿಕ್ಷಕರಿಲ್ಲದೆ ಮಕ್ಕಳು ಪರದಾಡುವಂತಾಗಿದೆ.

ನಕ್ಸಲ್‌ ಬಾಧಿತ ಪ್ರದೇಶವೆಂದು ಗುರುತಿಸಲ್ಪಟ್ಟ ಹಂಜ ಪರಿಸರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಡಾಮಕ್ಕಿ ಪೇಟೆಯಿಂದ ನಾಲ್ಕೂವರೆ ಕಿ.ಮೀ. ತೀರ ಒಳಪ್ರದೇಶದಲ್ಲಿದೆ. ಹಂಜ, ಎಡಮಲೆ ಭಾಗದಲ್ಲಿ 40ಕ್ಕೂ ಅಧಿಕ ಮನೆಗಳಿಗೆ ಇರುವ ಏಕೈಕ ಶಾಲೆಯಾಗಿದೆ. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಯನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಬೇಕು ಎನ್ನುವ ಸರಕಾರಿ ಆದೇಶವಿದ್ದರೂ ಶಾಲೆಯನ್ನು ಉಳಿಸಲು ಸ್ಥಳೀಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮೂಲಸೌಕರ್ಯ ವಂಚಿತ ಹಾಗೂ ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಏಕೈಕ ಶಾಲೆಯೆನ್ನುವ ನೆಲೆಯಲ್ಲಿ ಇಲಾಖೆ ಮತ್ತು ಸ್ಥಳೀಯರು ಶಾಲೆಯನ್ನು ಜೀವಂತವಾಗಿಸಿಕೊಂಡಿದ್ದಾರೆ. ಆದರೆ ಸರಕಾರಿ ಶಾಲೆಯಲ್ಲಿರುವ ಖಾಯಂ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ಪ್ರಸ್ತುತ ಶಿಕ್ಷಕರಿಲ್ಲದೆ ಶಾಲೆ ಮುಚ್ಚುವ ಭೀತಿ ಎದುರಾಗಿದೆ.

ಹಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1ರಿಂದ 5ನೇ ತರಗತಿಯಿದ್ದು, ಒಟ್ಟು 11 ಮಕ್ಕಳು ಕಲಿಯುತ್ತಿದ್ದಾರೆ. ಮಹಿಳಾ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ವಾರದಲ್ಲಿ ಎರಡು ದಿನ (ಶುಕ್ರವಾರ, ಶನಿವಾರ) ಅಲಾºಡಿ ಶಾಲೆಯ ಶಿಕ್ಷಕರೊಬ್ಬರನ್ನು ನಿಯೋಜಿಸಲಾಗಿದೆ. ಉಳಿದ ದಿನಗಳಲ್ಲಿ ಶಾಲೆ ಮುಚ್ಚಬಾರದು ಎನ್ನುವ ನೆಲೆಯಲ್ಲಿ ಸರಕಾರಿ ಆದೇಶವಿಲ್ಲದಿದ್ದರೂ ಸ್ಥಳೀಯರೆಲ್ಲ ಒಟ್ಟಾಗಿ ತಾತ್ಕಾಲಿಕವಾಗಿ ಶಿಕ್ಷಕಿಯೊಬ್ಬರನ್ನು ನೇಮಿಸಿಕೊಂಡಿದ್ದಾರೆ.

ಶಾಲೆಗೆ ತೆರಳುವುದಕ್ಕೆ ಸರಿಯಾದ ರಸ್ತೆಯಿಲ್ಲ. ಪ್ರಸ್ತುತ ಇರುವ ರಸ್ತೆ ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಸಂಚಾರವೆ ದುಸ್ತರವಾಗಿದೆ. ನೇಮಕಗೊಂಡ ಸರಕಾರಿ ಶಿಕ್ಷಕಿಯು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಿಳೆಯಾಗಿ ನಕ್ಸಲ್‌ ಬಾಧಿತ ಪ್ರದೇಶ ಸರಕಾರಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಈ ಪ್ರದೇಶದಲ್ಲಿ ಉಳಿಯುವುದಕ್ಕೆ ಬಾಡಿಗೆ ಕೊಠಡಿ ವ್ಯವಸ್ಥೆಯಿಲ್ಲದಿರುವುದರಿಂದ ಮಗು ಸಣ್ಣದಾಗಿರುವುದರಿಂದ ಅವರು ಅನಿವಾರ್ಯವಾಗಿ ರಜೆಯನ್ನು ವಿಸ್ತರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರನ್ನು ಬೇರೆ ಶಾಲೆಗೆ ವರ್ಗಾಯಿಸಿ ಹಂಜ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು. ಈ ಕುರಿತು ಇಲಾಖೆ ಸೂಕ್ತ ಕ್ರಮ ಕೈಗೊಂಡು ನಕ್ಸಲ್‌ ಬಾಧಿತ ಪ್ರದೇಶದ ಶಾಲೆಯ ಶಿಕ್ಷಕರ ಕೊರತೆ ನೀಗಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

 

Exit mobile version